ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನಜೀವನ ಕಷ್ಟಕರವಾಗಿದೆ.
ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು, ಉರಿಯುವ ಬಿಸಿಲಿಗೆ ಜನ ಹೈರಾಣಾಗುತ್ತಿದ್ದಾರೆ. ಈ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಗರವಾಸಿಗಳು ಈಗ ಬೈಕ್, ಸ್ಕೂಟರ್ ಹಾಗೂ ಎಸಿ ಇಲ್ಲದ ಕಾರುಗಳನ್ನು ಬಿಟ್ಟು, ತಂಪಾದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಸಿ ಬಸ್‌ಗಳು ಹಾಗೂ ನಮ್ಮ ಮೆಟ್ರೋ ಕಡೆಗೆ ಮುಖ ಮಾಡಿದ್ದಾರೆ. ಇದರಿಂದ ಸಾರಿಗೆ ಸಂಸ್ಥೆಗಳ ಆದಾಯವೂ ಹೆಚ್ಚುತ್ತಿದೆ.
ನಗರದಲ್ಲಿ ಈಗಾಗಲೇ 36 ಡಿಗ್ರಿ ತಾಪಮಾನ ದಾಖಲಾಗಿದ್ದು, ಬಿಸಿಲಿನ ತೀವ್ರತೆಗೆ ಜನರು ಕಂಗಾಲಾಗಿದ್ದಾರೆ. ಇದರ ಪರಿಣಾಮವಾಗಿ ಬಿಎಂಟಿಸಿ ಎಸಿ ಬಸ್‌ಗಳಿಗೆ ಭಾರೀ ಬೇಡಿಕೆ ಹೆಚ್ಚಾಗಿದೆ. ಡೀಸೆಲ್ ಹಾಗೂ ವಿದ್ಯುತ್ ಚಾಲಿತ ಸೇರಿ 535 ಎಸಿ ಬಸ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಬೇಸಿಗೆ ಆರಂಭವಾದ ಬಳಿಕ ಸುಮಾರು 2.5 ಕೋಟಿ ರೂ. ಆದಾಯ ಬಂದಿದೆ.
ಪ್ರಯಾಣಿಕರಾದ ಬಾಲಾಜಿ ಮಾತನಾಡಿ, “ನಗರದಲ್ಲಿ ಬಿಸಿಲು ಜಾಸ್ತಿಯಾಗಿರುವುದರಿಂದ ಹೊರಗೆ ಹೋಗಲು ಕಷ್ಟ. ಅದಕ್ಕಾಗಿ ಎಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದೇನೆ” ಎಂದಿದ್ದಾರೆ.
ಇನ್ನೊಂದೆಡೆ, ನಮ್ಮ ಮೆಟ್ರೋ ರೈಲುಗಳಲ್ಲಿ ಸಹ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ವಿಶೇಷವಾಗಿ ವೈಟ್‌ಫೀಲ್ಡ್–ಚಲ್ಲಘಟ್ಟ ಮಾರ್ಗದಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಭಾರೀ ಜನಸಂದಣಿ ಕಂಡುಬರುತ್ತಿದೆ. ನಿಲ್ಲಲು ಜಾಗವಿಲ್ಲದಷ್ಟು ಜನಸಂದಣಿ ಇದ್ದರೂ, ತಂಪಾದ ಪ್ರಯಾಣ ಜನರಿಗೆ ಸ್ವಲ್ಪ ನೆಮ್ಮದಿ ನೀಡುತ್ತಿದೆ.
ಮೆಟ್ರೋ ಪ್ರಯಾಣಿಕರಾದ ರಾಮದಾಸ್ ಪಂಡಿತ್ ಹೇಳುವಂತೆ, “ವೈಟ್‌ಫೀಲ್ಡ್‌ನಿಂದ ಮೆಜೆಸ್ಟಿಕ್‌ಗೆ ಮೆಟ್ರೋದಲ್ಲಿ ಬಂದೆ. ತುಂಬಾ ಜನಸಂದಣಿ ಇದ್ದರೂ ತಂಪಾಗಿತ್ತು. ಆದರೆ ಹೊರಗೆ ಇಳಿದ ಕೂಡಲೇ ಬೆವರು ಸುರಿಯುತ್ತಿದೆ” ಎಂದಿದ್ದಾರೆ.
ಒಟ್ಟಿನಲ್ಲಿ, ಬೆಂಗಳೂರಿನ ಬಿಸಿಲು ಜನರನ್ನು ಕಂಗೆಡಿಸುತ್ತಿದ್ದರೂ, ಎಸಿ ಬಸ್‌ಗಳು ಮತ್ತು ಮೆಟ್ರೋ ಸೇವೆಗಳು ತಾತ್ಕಾಲಿಕ ಪರಿಹಾರವಾಗಿ ಪರಿಣಮಿಸಿವೆ. ಬಿಸಿಲು ಹೆಚ್ಚಾದಂತೆ ಸಾರಿಗೆ ಸಂಸ್ಥೆಗಳ ಆದಾಯವೂ ಏರಿಕೆಯಾಗುತ್ತಿರುವುದು ಗಮನಾರ್ಹವಾಗಿದೆ.



