ವಿಜಯಸಾಕ್ಷಿ ಸುದ್ದಿ, ಗದಗ: ಭಾರತೀಯ ಸಂಸ್ಕೃತಿ, ಪರಂಪರೆಗಳ ಆಚರಣೆಯಲ್ಲಿ ರಥಸಪ್ತಮಿ ಆಚರಣೆ ವಿಶಿಷ್ಟ ಮತ್ತು ವೈಜ್ಞಾನಿಕವಾದುದಾಗಿದೆ. ಕಾರಣ ರಥಸಪ್ತಮಿ ಸೂರ್ಯದೇವರ ಆರಾಧನೆಯ ದಿನವಾಗಿದೆ. ಅಂದು ಕೆಲವರು ಧಾರ್ಮಿಕ ವಿಧಿ ವಿಧಾನಗಳಿಂದ ಸೂರ್ಯನನ್ನು ಆರಾಧಿಸಿದರೆ, ಇನ್ನು ಕೆಲವರು ಸೂರ್ಯ ನಮಸ್ಕಾರ, ವ್ಯಾಯಾಮ, ಸಾಧನೆಗಳ ಮೂಲಕ ಸೂರ್ಯನಿಗೆ ವಂದನೆ ಸಲ್ಲಿಸುವರು. ಸೂರ್ಯ ನಮಸ್ಕಾರದಲ್ಲಿ ಆಧ್ಯಾತ್ಮ, ಆರೋಗ್ಯ ಯೋಗ, ವ್ಯಾಯಾಮಗಳೆಲ್ಲವೂ ಸಮ್ಮಿಳಿತವಾಗಿವೆ ಎಂದು ಶರೀರ ರಚನಾ-ಕ್ರಿಯಾಶಾಸ್ತ್ರ ತಜ್ಞರು ಮತ್ತು ನಾಡಿ ವೈದ್ಯರಾದ ಡಾ. ಎಸ್.ಬಿ. ಗೋವಿಂದಪ್ಪನವರ ತಿಳಿಸಿದರು.
ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ ಮತ್ತು ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ ಸಿದ್ಧಲಿಂಗನಗರ ಗದಗ ಇವರುಗಳ ಸಹಯೋಗದಲ್ಲಿ ರಥ ಸಪ್ತಮಿ ಆಚರಣೆ ಪ್ರಯುಕ್ತವಾಗಿ ನಡೆಸಿದ ಸೂರ್ಯ ನಮಸ್ಕಾರ ಯಜ್ಞ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಆತಿಥಿಗಳಾಗಿ ಆಗಮಿಸಿದ ಹಿರಿಯ ಔಷಧ ವಿತರಣಾಧಿಕಾರಿಗಳಾದ ದತ್ತಾತ್ರೇಯ ತಿರುಮಲೆ ಮಾತನಾಡಿ, ಇತ್ತೀಚೆಗೆ ದೇವರ ಪೂಜೆ, ಹಿರಿಯರಿಗೆ ಗೌರವ ಸಲ್ಲಿಸುವ ಆಚರಣೆಗಳು ಕಡಿಮೆಯಾಗುತ್ತಲಿವೆ. ಕೊನೆಯ ಪಕ್ಷ ಇಡೀ ವಿಶ್ವಕ್ಕೆ ದೇವರು ಮತ್ತು ವಿಶ್ವದ ಎಲ್ಲ ಜೀವರಾಶಿಗಳ ಜೀವಾಳವಾಗಿರುವ ಸೂರ್ಯದೇವನಿಗೆ ಪ್ರತಿದಿನ ಸೂರ್ಯ ನಮಸ್ಕಾರ ರೂಢಿಸಿಕೊಂಡರೆ ನಾವು ಮತ್ತು ನಮ್ಮ ಸಮಾಜ ಆರೋಗ್ಯದಿಂದಿರಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಮೇಶ ಮೇರವಾಡೆ, ರವಿ ಹುಡೇದ, ವಿಷ್ಣುಪ್ರಕಾಶ ಹೆಬ್ಬಳ್ಳಿ, ಶಿವಲಿಂಗಪ್ಪ ಹುಡೇದ, ಎ.ಎಸ್. ಶೀಲವಂತರ, ಅರುಣಾ ಇಂಗಳಳ್ಳಿ, ಸಂಜನಾ ಸಜ್ಜನರ, ಜಯಶ್ರೀ ಡಾವಣಗೇರಿ, ವಿಜಯಾ ಚನ್ನಶೆಟ್ಟಿ, ವೀಣಾ ಮಾಲಿಪಾಟೀಲ, ಪುಷ್ಪಾ ತಿಪ್ಪಶೆಟ್ಟಿ, ವೀಣಾ ಗೌಡರ, ಪ್ರೇಮಾ ಗಾಣಿಗೇರ, ಸುಲೋಚನಾ ಕಾಲವಾಡ, ಮಾದೇವಿ ಚರಂತಿಮಠ, ಪ್ರತಿಭಾ ಇನಾಮತಿ, ವಿಜಯಲಕ್ಷ್ಮಿ ಮೇಕಳಿ, ಶೋಭಾ ಭಾಂಡಗೆ, ಸಂಗೀತಾ ನಾಕೋಡ ಸೇರಿದಂತೆ ಯೋಗ ಸಾಧಕ ಬಂಧುಗಳು ಪಾಲ್ಗೊಂಡಿದ್ದರು.
ಪ್ರಾರಂಭದಲ್ಲಿ ಸುನಂದಾ ಜ್ಯಾನೋಪಂತರ ಪ್ರಾರ್ಥನೆ ಹೇಳಿದರು. ಡಾ. ಎಂ.ವಿ. ಐಹೊಳ್ಳಿ ಸ್ವಾಗತಿಸಿದರು. ಕೆ.ಎಸ್. ಪಲ್ಲೆದ ಕಾರ್ಯಕ್ರಮ ನಿರೂಪಿಸಿದರು. ವಿ.ಎಂ. ಮುಂದಿನಮನಿ ವಂದಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ನಿವೃತ್ತ ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ಅಧ್ಯಕ್ಷೆ ವಿಜಯಲಕ್ಷ್ಮೀ ಆನೆಹೊಸೂರ, ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲದ ವೆಂಕಟೇಶ ಜಿತೂರಿ ಸಾಂದರ್ಭಿಕವಾಗಿ ಮಾತನಾಡಿದರು.