ತುಮಕೂರು: ಮಂಗಳೂರು ರೈಲ್ವೆ ಘಟಕವನ್ನು ಮೈಸೂರು ವಲಯಕ್ಕೆ ಸೇರ್ಪಡೆಗೊಳಿಸಿರುವ ವಿಚಾರ ಕೇರಳದಲ್ಲಿ ರಾಜಕೀಯ ಚರ್ಚೆ ಹಾಗೂ ಪ್ರತಿಭಟನೆಗೆ ಕಾರಣವಾಗಿರುವ ಬೆನ್ನಲ್ಲೇ, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಕೇರಳದ ರಾಜಕೀಯ ಪಕ್ಷಗಳಿಗೆ ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಯಾವುದೇ ತಪ್ಪು ಮಾಡಿಲ್ಲ. ಕೇರಳಕ್ಕೆ ಸಂಬಂಧಿಸಿದಂತೆ ಯಾವುದೇ ಅಪಚಾರ ಎಸಗಿಲ್ಲ. ನಿಮ್ಮ ರಾಜ್ಯದಲ್ಲಿ ಏನು ಬೇಕಾದರೂ ನೀವು ನೋಡಿಕೊಳ್ಳಿ’ ಎಂದು ಹೇಳಿದ್ದಾರೆ. ದಕ್ಷಿಣದ ರಾಜ್ಯಗಳೆಲ್ಲ ಒಗ್ಗೂಡಬೇಕು ಎಂಬ ಅಭಿಪ್ರಾಯ ಕರ್ನಾಟಕ ಸರ್ಕಾರದ ಕಡೆಯಿಂದಲೂ ವ್ಯಕ್ತವಾಗಿರುವ ಸಂದರ್ಭದಲ್ಲೇ ಸೋಮಣ್ಣ ಈ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.
ಮಂಗಳೂರು ರೈಲ್ವೆ ಘಟಕವನ್ನು ಮೈಸೂರು ವಿಭಾಗಕ್ಕೆ ಸೇರಿಸುವ ನಿರ್ಧಾರದ ಹಿಂದೆ ಯಾವುದೇ ರಾಜಕೀಯ ಅಥವಾ ವೈಯಕ್ತಿಕ ಹಿತಾಸಕ್ತಿ ಇಲ್ಲ ಎಂದು ಸೋಮಣ್ಣ ಸ್ಪಷ್ಟಪಡಿಸಿದರು. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ವಿಚಾರಕ್ಕೆ ತಾಂತ್ರಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಪರಿಹಾರ ಕಂಡುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಮಂಗಳೂರು ಭಾಗವನ್ನು ಪ್ರತ್ಯೇಕ ರೈಲ್ವೆ ವಿಭಾಗವನ್ನಾಗಿ ಮಾಡಬೇಕು ಎಂಬ ಬೇಡಿಕೆ ಸುಮಾರು 25 ವರ್ಷಗಳಿಂದ ಇತ್ತು ಎಂದು ಸೋಮಣ್ಣ ಹೇಳಿದರು. ಈ ಹಿಂದೆ ಹಲವು ರೈಲ್ವೆ ಸಚಿವರು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಕೂಡ ಇದಕ್ಕಾಗಿ ಪ್ರಯತ್ನಿಸಿದ್ದರು ಎಂದೂ, ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ತಮ್ಮನ್ನು ಭೇಟಿಯಾಗಿ ಈ ವಿಚಾರಕ್ಕೆ ಒಂದು ರೂಪ ನೀಡುವಂತೆ ಮನವಿ ಮಾಡಿದ್ದರು ಎಂದೂ ಸೋಮಣ್ಣ ತಿಳಿಸಿದರು.
‘ನಾನು ಸಚಿವನಾಗಿರುವುದರಿಂದ ಈ ವಿಚಾರದ ಸಂಪೂರ್ಣ ಮಾಹಿತಿ ನನಗಿತ್ತು. ಮೂರು ಜನರಲ್ ಮ್ಯಾನೇಜರ್ಗಳನ್ನು ಸ್ಥಳಕ್ಕೆ ಕರೆದೊಯ್ದು ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿದ ಏಕೈಕ ಸಚಿವ ನಾನಾಗಿದ್ದೇನೆ. ಅಧಿಕಾರಿಗಳು ತಾಂತ್ರಿಕವಾಗಿ ಪರಿಶೀಲಿಸಿಯೇ ಕೆಲಸ ಮಾಡಿದ್ದಾರೆ. ಇದರಲ್ಲಿ ಯಾವುದೇ ಪಕ್ಷಪಾತ ಇಲ್ಲ’ ಎಂದು ಅವರು ಹೇಳಿದರು.



