ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ತದಡಿ ಬಂದರಿನಲ್ಲಿ ಬೋಟ್ನೊಳಗೆ ಉಸಿರುಗಟ್ಟಿ ಮೂವರು ಮೀನುಗಾರರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ನೌಶಾದ್ (48), ಅಮೀನ್ (40) ಮತ್ತು ಅಮನ್ (26) ಮೃತಪಟ್ಟ ಮೀನುಗಾರರು.
ಘಟನೆಯಲ್ಲಿ ಇನ್ನಿಬ್ಬರು ಮೀನುಗಾರರನ್ನು ರಕ್ಷಿಸಲಾಗಿದ್ದು, ಅವರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಅಬ್ದುಲ್ ಯಾಕುಬ್ ದಾಡಿಯಾ (60) ಅಸ್ವಸ್ಥಗೊಂಡಿದ್ದು, ಅವರನ್ನು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೀನುಗಾರರು ತದಡಿಯ ಕುಚೈಮಾ ಬೋಟ್ನಲ್ಲಿ ಕೆಲಸ ಮಾಡುತ್ತಿದ್ದರು. ಚಮನ್ ಮೀನು ಹಿಡಿದು ಬಂದರಿಗೆ ಮರಳಿದ ಬಳಿಕ, ಬೋಟ್ನಲ್ಲಿದ್ದ ಮೀನುಗಳನ್ನು ಸಂಗ್ರಹಿಸುವ ಸ್ಥಳಕ್ಕೆ ಇಳಿದು ಖಾಲಿ ಮಾಡಿದ್ದರು. ಬಳಿಕ ಮೀನು ಇಟ್ಟಿದ್ದ ಸ್ಥಳವನ್ನು ಸ್ವಚ್ಛಗೊಳಿಸುವ ವೇಳೆ ಮೀನಿನ ವಾಸನೆ ಅಥವಾ ವಿಷಕಾರಿ ಅನಿಲದಿಂದ ಉಸಿರುಗಟ್ಟಿರುವ ಶಂಕೆ ವ್ಯಕ್ತವಾಗಿದೆ.
ಈ ವೇಳೆ ಮೂವರು ಮೀನುಗಾರರು ಮೃತಪಟ್ಟಿದ್ದು, ಇತರ ಇಬ್ಬರನ್ನು ರಕ್ಷಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.










