ದಾವಣಗೆರೆ: ಜಿಲ್ಲೆಯ ಲೋಕಿಕೆರೆ ಗ್ರಾಮ…ದೇಶದಾದ್ಯಂತ ದೀಪಾವಳಿ ಅಂದರೆ ಬೆಳಕಿನ ಹಬ್ಬ, ಸಂಭ್ರಮ, ಸಂತೋಷ. ಆದರೆ ಈ ಹಳ್ಳಿಯಲ್ಲಿ ದೀಪಾವಳಿ ಅಂದರೆ ಭಯ, ದುಃಖ, ಕತ್ತಲೆ! ಹೌದು, ಇಲ್ಲಿನ ಜನರ ಮನದಲ್ಲಿ ದೀಪಾವಳಿ ಹಬ್ಬದ ಹೆಸರು ಕೇಳಿದರೂ ಕಳವಳ ಮೂಡುತ್ತದೆ. ಬೆಳಕಿನ ಹಬ್ಬವೇ ಇವರ ಪಾಲಿಗೆ “ಕರಾಳ ದಿನ” ಆಗಿದೆ.
ಗ್ರಾಮದ ಹಿರಿಯರ ಪ್ರಕಾರ ನೂರಾರು ವರ್ಷಗಳ ಹಿಂದೆ ದೀಪಾವಳಿ ಹಬ್ಬದ ದಿನದಂದು ಊರಿನ ನೂರಾರು ಯುವಕರು ಉತ್ಸವದ ಸಿದ್ಧತೆಯಲ್ಲಿ ಊರಿನಿಂದ ಹೊರಟು ಹೋಗಿ ಮತ್ತೆ ಹಿಂದಿರುಗಲೇ ಇಲ್ಲ. ಹುಡುಕಿದರೂ ಸುಳಿವು ಸಿಗಲಿಲ್ಲ. ಆ ಘಟನೆ ನಂತರದಿಂದ ದೀಪಾವಳಿ ದಿನವೇ ದುರಂತದ ದಿನ ಎಂದು ನಂಬಿಕೆ ಬೇರೂರಿತು.
ಆ ದಿನದಿಂದ ಇಂದಿನವರೆಗೆ ಸುಮಾರು 200ಕ್ಕೂ ಹೆಚ್ಚು ಕುಟುಂಬಗಳು ಈ ಹಬ್ಬದಿಂದ ದೂರವಿದ್ದಾರೆ. ದೇಶದಾದ್ಯಂತ ಮನೆ ಮನೆ ಬೆಳಗುತ್ತಿದ್ದಾಗ, ಲೋಕಿಕೆರೆಯ ಮನೆಗಳಲ್ಲಿ ಕತ್ತಲೆ ಆವರಿಸುತ್ತದೆ.
ಐದು ದಶಕಗಳ ಹಿಂದೆ ಕೆಲವು ಕುಟುಂಬಗಳು “ಹಳೆಯ ನಂಬಿಕೆ ಬಿಟ್ಟು ಹಬ್ಬ ಆಚರಿಸೋಣ” ಎಂದು ನಿರ್ಧರಿಸಿದರೂ, ಅದೇ ದಿನ ಜಮೀನಿನ ಪೈರುಗಳಿಗೆ ಹಾಗೂ ಹುಲ್ಲಿನ ಬಣವಿಗೆ ಬೆಂಕಿ ಬಿದ್ದ ಘಟನೆಯಿಂದ ಅವರು ಮತ್ತಷ್ಟು ಭಯಗೊಂಡರು. ಅದಾದ ನಂತರ ಯಾರೂ ದೀಪಾವಳಿ ಆಚರಿಸುವ ಧೈರ್ಯ ತೋರಲಿಲ್ಲ.
ಇಂದಿಗೂ ಲೋಕಿಕೆರೆಯಲ್ಲಿ ದೀಪಾವಳಿಯ ದಿನ ಕತ್ತಲೆ, ನೆನಪು, ಭಯ, ಎಲ್ಲವೂ ಒಂದೇ ಆಗಿದೆ. ಬೆಳಕಿನ ಹಬ್ಬವೇ ಇವರ ಪಾಲಿಗೆ ಕತ್ತಲಿನ ಕಥೆಯಾಗಿದೆ.