ಕನ್ನಡ ಚಿತ್ರರಂಗದ ಇಂದಿನ ಸ್ಥಿತಿಗೆ ನಿರ್ಮಾಪಕ ಕೆ. ಮಂಜು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಇವತ್ತಿನ ಕನ್ನಡ ಇಂಡಸ್ಟ್ರಿಯನ್ನು ನೋಡಿದ್ರೆ ಬೇಸರ ಆಗುತ್ತದೆ. ಇಂಡಸ್ಟ್ರಿ ಉಳಿಸಿಕೊಳ್ಳುವ ಕೆಲಸ ಆಗಬೇಕು. ಇಲ್ಲಾಂದ್ರೆ ಇಂಡಸ್ಟ್ರಿ ಕಥೆ ಮುಗಿದು ಹೋಗುತ್ತೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಈಗಲೇ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ ಇಂಡಸ್ಟ್ರಿ ಬಾಗಿಲು ಹಾಕೋದು ಗ್ಯಾರಂಟಿ ಎಂದು ಅವರು ಗಂಭೀರವಾಗಿ ಹೇಳಿದ್ದಾರೆ. “ಯಾರ್ ಯಾರೋ ಮಧ್ಯವರ್ತಿಗಳಿಂದ ಇಂಡಸ್ಟ್ರಿ ಈ ಸ್ಥಿತಿಗೆ ತಲುಪಿದೆ. ಸಿನಿಮಾಗೆ ಇನ್ವೆಸ್ಟ್ ಮಾಡೋಕೆ ತುಂಬಾ ಜನ ಬರುತ್ತಿದ್ದಾರೆ. ಆದರೆ ಅದು ಸರಿಯಾದ ಮಾರ್ಗದಲ್ಲಿ ನಡೆಯುತ್ತಿಲ್ಲ. ಕೆಲ ಮಧ್ಯವರ್ತಿಗಳಿಂದಲೇ ಇಂಡಸ್ಟ್ರಿ ಹಾಳಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.
ಈ ಹಿನ್ನೆಲೆ ಕನ್ನಡ ಚಿತ್ರರಂಗಕ್ಕೆ ಬಲಿಷ್ಠ ನಾಯಕತ್ವ ಅಗತ್ಯ ಎಂದು ಕೆ. ಮಂಜು ಅಭಿಪ್ರಾಯಪಟ್ಟಿದ್ದಾರೆ. “ಇನ್ನೂ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ ಥರಾ ಹಿರಿಯರು ನಾಯಕತ್ವ ವಹಿಸಿಕೊಳ್ಳಬೇಕು. ಸೀನಿಯರ್ಸ್ ಮುಂದೆ ಬಂದು ದಿಕ್ಕು ತೋರಿಸಬೇಕು” ಎಂದು ಹೇಳಿದ್ದಾರೆ.
ಈ ಮೂಲಕ ಸದ್ಯ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಪಷ್ಟ ನಾಯಕತ್ವದ ಕೊರತೆ ಇದೆ ಎಂಬುದನ್ನು ಕೆ. ಮಂಜು ನೇರವಾಗಿ ಒಪ್ಪಿಕೊಂಡಂತಾಗಿದೆ.



