ವಿಜಯಸಾಕ್ಷಿ ಸುದ್ದಿ, ಬೆಂಗಳೂರು : ಓಂ ಸಾಯಿ ಸಿನಿಮಾಸ್ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ‘ಸುಮಾ’ ಸಿನಿಮಾದ ಚಿತ್ರೀಕರಣ ಸಂಪೂರ್ಣ ಮುಕ್ತಾಯಗೊಂಡು ಧ್ವನಿಮುದ್ರಣ ಕಾರ್ಯದಲ್ಲಿ ತೊಡಗಿದೆ.
‘ಸುಮಾ’ ಚಿತ್ರದ ಚಿತ್ರೀಕರಣ ಮಂಡ್ಯ ಜಿಲ್ಲೆಯ ಕೆ.ಎಂ. ದೊಡ್ಡಿ (ಭಾರತೀನಗರ), ಆಲಭುಜನಹಳ್ಳಿ, ನಗರಕೆರೆ ಮತ್ತು ಮಾಲಗಾರನಹಳ್ಳಿಯ ಸುತ್ತಮುತ್ತ ನಡೆದರೆ, ಹಾಡುಗಳ ಚಿತ್ರೀಕರಣಕ್ಕಾಗಿ ತಂಡ ಊಟಿಗೆ ತೆರಳಿತ್ತು. ಈ ಹಿಂದೆ ನಾಲ್ಕು ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ರಶ್ಮಿ ಎಸ್ ‘ಸುಮಾ’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದು, ಮೈಸೂರು ಮೂಲದ ಪ್ರದೀಪ್ ಗೌಡ ನಾಯಕನಾಗಿ, ನಾಯಕಿಯಾಗಿ ಮೊದಲ ಬಾರಿಗೆ ಮಾನ್ಯತಾ ನಾಯ್ಡು ನಟಿಸಿದ್ದಾರೆ.
ಈ ಸಿನಿಮಾಕ್ಕೆ ದೇವೂ, ವಿನಾಯಕ್ ರೇವಡಿ ಬಾಗಲಕೋಟೆ ಮತ್ತು ಗಗನ್ ಆರ್ ಇವರ ಛಾಯಾಗ್ರಹಣ, ಮುತ್ತುರಾಜ್ ಟಿ. ಸಂಕಲನವಿದೆ. ಸಿನಿಮಾದ ಹಾಡುಗಳಿಗೆ ವೇದಾಂತ್ ಅತಿಶಯ್ ಜೈನ್ ಸಂಗೀತವಿದ್ದು, ಸತೀಶ್ ಜೋಶಿ ಹಾವೇರಿ ಮತ್ತು ಪ್ರದೀಪ್ ಗೌಡ ಅವರ ಸಾಹಿತ್ಯವಿದೆ. ಮೇಘನ ಹಳಿಯಾಳ ಮತ್ತಿತರರು ಹಾಡುಗಳಿಗೆ ಧ್ವನಿ ನೀಡಿದ್ದು, ಪತ್ರಿಕಾಸಂಪರ್ಕ ಕಾರ್ತಿಕ್ ಸುಧನ್, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಅವರದಿದೆ. ಸಿನಿಮಾಕ್ಕೆ ರಂಗಸ್ವಾಮಿ ಟಿ ಸಹ ನಿರ್ಮಾಪಕರಾಗಿದ್ದಾರೆ. ಚಿತ್ರತಂಡದ ಯೋಜನೆಯಂತೆ, ಇದೇ ಆಗಸ್ಟ್ ವೇಳೆಗೆ ‘ಸುಮಾ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳನ್ನು ಪೂರ್ಣಗೊಳಿಸಿ, ಅಕ್ಟೋಬರ್‌ನಲ್ಲಿ ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.