ಬೆಂಗಳೂರು:- ಬೆಂಗಳೂರಿಗೆ ಸಪ್ಲೈ ಆಗಿದ್ದು ನಾಯಿಮಾಂಸ ಅಲ್ಲ ಕುರಿ ಮಾಂಸ ಎಂದು ಹೈದರಾಬಾದ್ ಲ್ಯಾಬ್ ವರದಿಯಲ್ಲಿ ಸ್ಪಷ್ಟವಾಗಿದೆ. ರಾಜಸ್ಥಾನದಿಂದ ವ್ಯಾಪಾರಿ ಅಬ್ದುಲ್ ರಜಾಕ್ ತರಿಸುತ್ತಿದ್ದ ಕುರಿ ಮಾಂಸದಲ್ಲಿ ನಾಯಿ ಮಾಂಸವೂ ಮಿಶ್ರಣವಾಗಿರುತ್ತದೆ ಎಂದು ಪುನೀತ್ ಕೆರೆಹಳ್ಳಿ ಸೇರಿ ಹಲವು ಆರೋಪಿಸಿದ್ದರು.
ಹಾಗಾಗಿ, ಬಾಕ್ಸ್‌ನಲ್ಲಿದ್ದ ಮಾಂಸದ ಸ್ಯಾಂಪಲ್‌ಅನ್ನು ಹೈದರಾಬಾದ್ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಈಗ ಲ್ಯಾಬ್ ವರದಿ ಬಂದಿದ್ದು, ಅದು ಕುರಿ ಮಾಂಸವೇ ಎಂಬುದು ದೃಢವಾಗಿದೆ ಎಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ತಿಳಿಸಿದೆ. ಅಲ್ಲಿಗೆ, ನಾಯಿ ಮಾಂಸ ವಿವಾದವು ಸತ್ವ ಕಳೆದುಕೊಂಡಂತಾಗಿದೆ.
ಜುಲೈ 26ರಂದು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ 86 ಬಾಕ್ಸ್‌ಗಳಷ್ಟು ರಾಜಸ್ಥಾನದಿಂದ ತರಿಸಿದ ಮಾಂಸದ ಬಾಕ್ಸ್‌ಗಳು ಪತ್ತೆಯಾಗಿದ್ದವು. ಇವುಗಳನ್ನು ಹೈದರಾಬಾದ್‌ನ ICAR ನ್ಯಾಷನಲ್ ಮೀಟ್ ರಿಸರ್ಚ್ ಇನ್ಸ್ಟಿಟ್ಯೂಟ್‌ನಲ್ಲಿ ಪರೀಕ್ಷೆ ಮಾಡಿಸಲಾಗಿದೆ. ಅದರಲ್ಲಿ S Ovis Aries ಎಂದು ಲ್ಯಾಬ್ ವರದಿಯಲ್ಲಿ ಬಂದಿದೆ. ಹಾಗೆಂದರೆ ಅದು ಕುರಿಯ ವೈಜ್ಞಾನಿಕ ಹೆಸರು. ಹೀಗಾಗಿ ಇದು ಕುರಿ ಮಾಂಸ ಎಂದು ಇಲಾಖೆ ಆಯುಕ್ತ ಶ್ರೀನಿವಾಸ್ ಅಧಿಕೃತವಾಗಿ ಹೇಳಿಕೆ ನೀಡಿದ್ದರು.
FSSAI ಗೈಡ್‌ಲೈನ್ಸ್ ಪ್ರಕಾರ ಉದ್ಯಮಿ ರಜಾಕ್ ಕೊಟ್ಟ ದಾಖಲೆ ಎಲ್ಲವೂ ಸರಿಯಾಗಿಯೇ ಇದೆ. ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ ಸೇರಿದಂತೆ ಹಲವು ಕಡೆಯಿಂದ ನಗರಕ್ಕೆ ಮಾಂಸ ಆಮದಾಗುತ್ತಿದೆ. ಮೀನು, ಕುರಿ ಸೇರಿದಂತೆ ವಿವಿಧ ರೀತಿಯ ಮಾಂಸ ಆಮದಾಗುತ್ತಿದೆ. ಎಲ್ಲವನ್ನೂ ಆಹಾರ ಗುಣಮಟ್ಟ ಇಲಾಖೆ ಪರೀಕ್ಷೆ ಮಾಡಿದೆ. ಮುಂದೆಯೂ ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದರು.