ಗದಗ: ದೇಶದಲ್ಲಿ ಜಾತ್ಯತೀತ ಮೌಲ್ಯಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಜಾತ್ಯತೀತ ಮೌಲ್ಯಗಳನ್ನು ಬಲಪಡಿಸುವ ಅಗತ್ಯವಿದ್ದು, ಜಾತೀಯತೆ ಮತ್ತು ಅಸಮಾನತೆ ಇನ್ನೂ ಸಮಾಜದಲ್ಲಿ ಉಳಿದಿರುವುದು ದುರ್ದೈವ ಎಂದು ಹೇಳಿದರು.
ನಮ್ಮ ದೇಶದಲ್ಲಿ ಜಾತಿಯತೆ ಮತ್ತು ಅಸಮಾನತೆ ಇದೆ. ಸ್ವಾತಂತ್ರ್ಯ ದೊರೆತು ಇಷ್ಟು ವರ್ಷಗಳಾದರೂ ಕೂಡ ಕಂದಾಚಾರ ಮತ್ತು ಜಾತೀಯತೆ ಸಂಪೂರ್ಣವಾಗಿ ಹೋಗಿಲ್ಲ ಎಂದು ಸಿಎಂ ವಿಷಾದ ವ್ಯಕ್ತಪಡಿಸಿದ್ದು, ವಿಶೇಷವಾಗಿ ಶಿಕ್ಷಿತರಲ್ಲಿಯೇ ಸಾಕಷ್ಟು ಜಾತೀಯತೆ ಇರುವುದನ್ನು ನೋಡಿದರೆ ದುಃಖವಾಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು. ಬಸವಣ್ಣನವರು 800 ವರ್ಷಗಳ ಹಿಂದೆಯೇ ಸಮಾನತೆ ಮತ್ತು ಮಾನವತೆಯ ಕುರಿತು ಸಂದೇಶ ನೀಡಿದ್ದರು ಎಂದು ಸಿದ್ದರಾಮಯ್ಯ ಉಲ್ಲೇಖಿಸಿದರು. ಶಿಕ್ಷಣವನ್ನು ಕೇವಲ ಉದ್ಯೋಗಕ್ಕಾಗಿ ಮಾತ್ರವಲ್ಲ, ಮನುಷ್ಯತ್ವ ಬೆಳೆಸಿಕೊಳ್ಳಲು ಪಡೆಯಬೇಕು ಎಂದು ಹೇಳಿದರು.
ಇನ್ನೂ ತಮ್ಮ ಹೆಸರಿನ ಕುರಿತು ಮಾತನಾಡಿದ ಸಿಎಂ, ‘ಸಿದ್ದ’ ಎಂದರೆ ಈಶ್ವರ ಎಂಬ ಅರ್ಥವಿದೆ. ರಾಮ, ವಿಷ್ಣು ಎಂಬ ಉಲ್ಲೇಖಗಳ ಜೊತೆಗೆ ‘ಸಿದ್ದ-ರಾಮ’ ಎಂಬ ದ್ವಂದ್ವ ನಾಮದಿಂದ ಸಿದ್ದರಾಮಯ್ಯ ಎಂಬ ಹೆಸರು ಬಂದಿದೆ ಎಂದು ವಿವರಿಸಿದರು. ದೇವರಿಗೆ ಭಯಪಡುವುದು ಒಂದು ವಿಷಯ, ಆದರೆ ದೇವರನ್ನು ನಮಗೆ ಇಷ್ಟ ಬಂದಂತೆ ಬಳಸಿಕೊಳ್ಳಲು ಸಾಧ್ಯವಿಲ್ಲ.
ದೇವರು ಎಂದಿಗೂ ಮನುಷ್ಯರಾಗಿರಿ ಎಂದು ಹೇಳುತ್ತಾನೆ, ಅಸಮಾನತೆ ಬೆಳೆಸಿರಿ ಎಂದು ಹೇಳಿಲ್ಲ ಎಂದು ಹೇಳಿದರು. ನಮ್ಮ ದೇಶದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ್, ಬೌದ್ಧ, ಸಿಖ್ ಸೇರಿದಂತೆ ಅನೇಕ ಧರ್ಮಗಳಿವೆ. ಯಾವುದೇ ಧರ್ಮವೂ ದ್ವೇಷವನ್ನು ಬೋಧಿಸುವುದಿಲ್ಲ. ಎಲ್ಲಾ ಧರ್ಮಗಳು ಪ್ರೀತಿ ಮತ್ತು ಸಹಬಾಳ್ವೆಯನ್ನು ಬಯಸುತ್ತವೆ. ದ್ವೇಷವನ್ನು ಬಿತ್ತುವಂತಹ ಕೆಲಸ ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು.



