ಹಾಸನ: ಶೆಟ್ಟಿಹಳ್ಳಿ ಚರ್ಚ್ ವೀಕ್ಷಣೆಗೆ ತೆರಳಿದ್ದ ಬೆಂಗಳೂರಿನ ಯುವಕರ ತಂಡಕ್ಕೆ ಭೀಕರ ದುರಂತ ಸಂಭವಿಸಿದ್ದು, ಹೇಮಾವತಿ ನದಿಯ ಹಿನ್ನೀರಿನಲ್ಲಿ ಈಜಲು ಇಳಿದ ಮೂವರು ಯುವಕರು ನೀರುಪಾಲಾಗಿದ್ದಾರೆ.
ಚರಣ್ (20), ಮಿಲನ್ (23) ಮತ್ತು ಮಣಿಕಂಠ (20) ಮೃತ ದುರ್ದೈವಿಗಳು. ಧರ್ಮಸ್ಥಳ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂದಿರುಗುತ್ತಿದ್ದ 10 ಮಂದಿ ಸ್ನೇಹಿತರ ತಂಡ, ಗೂಗಲ್ ಮ್ಯಾಪ್‌ನಲ್ಲಿ ಶೆಟ್ಟಿಹಳ್ಳಿ ಚರ್ಚ್ ಬಗ್ಗೆ ಮಾಹಿತಿ ತಿಳಿದು ಅಲ್ಲಿಗೆ ಭೇಟಿ ನೀಡಿತ್ತು.
ಈ ವೇಳೆ ಚರ್ಚ್ ಸಮೀಪದ ಹಿನ್ನೀರಿನಲ್ಲಿ ಈಜಲು ಇಳಿದ ಮೂವರು ಯುವಕರು ನೀರಿನ ಆಳ ಅರಿಯದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಡದಲ್ಲಿದ್ದ ಸ್ನೇಹಿತರು ಸಹಾಯಕ್ಕಾಗಿ ಕೂಗಿಕೊಂಡರೂ, ಯಾರಿಗೂ ಈಜು ಬಾರದ ಕಾರಣ ಯುವಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಕತ್ತಲೆ ಹೆಚ್ಚಾದ ಹಿನ್ನೆಲೆಯಲ್ಲಿ ಶೋಧ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಉಳಿದ ಯುವಕನ ಮೃತದೇಹಕ್ಕಾಗಿ ಸೋಮವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗುತ್ತದೆ.
ಪ್ರವಾಸದ ಉತ್ಸಾಹದಲ್ಲಿದ್ದ ಯುವಕರ ತಂಡಕ್ಕೆ ಈ ದುರಂತ ಆಘಾತ ಉಂಟುಮಾಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.



