ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪ್ರಜಾಪ್ರಭುತ್ವವು ಕೇವಲ ಮತದಾನಕ್ಕೆ ಸೀಮಿತವಾಗದೆ, ಜವಾಬ್ದಾರಿಯುತ ನಾಯಕತ್ವ, ಸೇವಾ ಮನೋಭಾವ ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸುವ ಜೀವನ ಪದ್ಧತಿಯಾಗಿದೆ. ಇಂತಹ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ಬೆಳೆಸಲು ಶಾಲಾ ಸಂಸತ್ತಿನ ರಚನೆ ಅತ್ಯಗತ್ಯ ಎಂದು ನಿಡಗುಂದಿಯ ಶ್ರೀ ಅನ್ನದಾನೇಶ್ವರ ಪ್ರೌಢಶಾಲೆಯ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಎಸ್.ಎಚ್. ಕೊಪ್ಪದ ಹೇಳಿದರು.
ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ ಪದಾಧಿಕಾರಿಗಳ ಆಯ್ಕೆ ಹಾಗೂ ಪ್ರಮಾಣವಚನ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂಸತ್ತಿನ ಮಾದರಿಯಲ್ಲಿ ಶಾಲಾ ಸಂಸತ್ತಿನ ರಚನೆಯು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ಸಹಕಾರ ಮನೋಭಾವ ಹಾಗೂ ಸಾರ್ವಜನಿಕ ಸೇವೆಯಂತಹ ಮೌಲ್ಯಗಳನ್ನು ಬೆಳೆಸುವ ಅರ್ಥಪೂರ್ಣ ಹೆಜ್ಜೆಯಾಗಿದೆ. ಇಂದಿನ ವಿದ್ಯಾರ್ಥಿಗಳೇ ನಾಳಿನ ಪ್ರಜೆಗಳು ಮತ್ತು ಜನಪ್ರತಿನಿಧಿಗಳಾಗಲಿದ್ದು, ಶಾಲಾ ಸಂಸತ್ತಿನ ಅನುಭವವು ಅವರ ವ್ಯಕ್ತಿತ್ವ ವಿಕಸನಕ್ಕೆ ಭದ್ರ ಅಡಿಪಾಯವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಸ್ಥಾನಿಕ ಅಧ್ಯಕ್ಷ ಜಗದೀಶ ಕರಡಿ ಮಾತನಾಡಿ, ಅಧಿಕಾರವನ್ನು ಪ್ರತಿಷ್ಠೆಯ ಸಂಕೇತವಾಗಿ ಅಲ್ಲ, ಸೇವೆಯ ಸಾಧನವಾಗಿ ಪರಿಗಣಿಸಿ ವಿದ್ಯಾರ್ಥಿ ಪ್ರತಿನಿಧಿಗಳು ಸಹಪಾಠಿಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು. ಶಿಸ್ತು, ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವವೇ ಉತ್ತಮ ನಾಯಕತ್ವದ ಗುಣಗಳಾಗಿವೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಎಂ.ಬಿ. ಕೊಪ್ಪದ ಮಾತನಾಡಿ, ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಂಘಟನಾ ಕೌಶಲ್ಯ, ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಹಾಗೂ ತಂಡದೊಂದಿಗೆ ಕಾರ್ಯನಿರ್ವಹಿಸುವ ಗುಣಗಳನ್ನು ಬೆಳೆಸುವ ಪರಿಣಾಮಕಾರಿ ವೇದಿಕೆಯಾಗಿದೆ. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕ ಎಸ್.ವಿ. ಹಳ್ಳಿಕೇರಿ ಶಾಲಾ ಸಂಸತ್ತಿನ ಉದ್ದೇಶ, ರಚನೆ ಹಾಗೂ ವಿವಿಧ ಸಚಿವರ ಕರ್ತವ್ಯಗಳ ಕುರಿತು ಮಾಹಿತಿ ನೀಡಿದರು. ಬಳಿಕ ಶಿಕ್ಷಕ ಜೆ.ಪಿ. ಗೋಂದಳೆ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.
2026-27ನೇ ಸಾಲಿನ ಶಾಲಾ ಸಂಸತ್ತಿನ ಪ್ರಧಾನಮಂತ್ರಿಯಾಗಿ ಮಲ್ಲಿಕಾರ್ಜುನ ಗಡಾದ, ಉಪಪ್ರಧಾನಮಂತ್ರಿಯಾಗಿ ಸ್ವಾತಿ ಕಳಕಾಪೂರ ಆಯ್ಕೆಯಾದರು. ವಿವಿಧ ಸಚಿವ ಸ್ಥಾನಗಳಿಗೆ ಅನಿಲ ದೇಸಾಯಿ, ಅಮೃತಾ ಕಂಬಳಿ, ವೀರಭದ್ರ ಗಡಾದ, ಶ್ವೇತಾ ಧರಣೆಪ್ಪಗೌಡ, ಮನೋಜ ಡುಮ್ಮನವರ, ಶಾಹಿನಾ ನದಾಫ್, ಶಾವು ಬಾಣದ, ಲಕ್ಷ್ಮೀ ಕಂಬಳಿ, ಕಂಠೆಪ್ಪ ಕಾಲವಾಡ, ಅನ್ನಪೂರ್ಣ ಗಡಾದ, ವಿನೋದ ದಿವಟರ, ಪ್ರಿಯಾಂಕಾ ಗುರಿಕಾರ, ಅಭಿಷೇಕ ಭೂಸನೂರಮಠ, ವಿಜಯ ಮಠಪತಿ, ಧನರಾಜ ಕರಮುಡಿ ಸೇರಿದಂತೆ ಹಲವು ವಿದ್ಯಾರ್ಥಿಗಳು ಆಯ್ಕೆಯಾದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಕೆ.ಬಿ. ಗಡಾದ, ಎಸ್.ಬಿ. ಹಿರೇಮಠ, ನಂದಾ ಮೆಣಸಗಿ, ಪೂಜಾ ಅಂಗಡಿ, ಬಿ.ಪಿ. ಕಾಗಿ, ಚೇತನ್ ಭೂಸನೂರಮಠ, ವೀರಣ್ಣ ಅರಮನಿ ಹಾಗೂ ಸಂತೋಷ ಚಿಲ್ಲಜರಿ ಉಪಸ್ಥಿತರಿದ್ದರು.
ಎಚ್.ಬಿ. ಕಟ್ಟಿಮನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
“ಶಾಲಾ ಸಂಸತ್ತು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ.”
– ಎಸ್.ಎಚ್. ಕೊಪ್ಪದ, ಸ್ಥಾನಿಕ ಆಡಳಿತ ಮಂಡಳಿ ಸದಸ್ಯರು



