ಬೀದರ್: ಜಿಲ್ಲೆಯ ಹುಮನಾಬಾದ್-ಬಸವಕಲ್ಯಾಣ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರು ಡಿಕ್ಕಿ ಹೊಡೆದ ಪರಿಣಾಮ 15 ಕುರಿಗಳು ಮೃತಪಟ್ಟಿವೆ.
ಹುಮನಾಬಾದ್ ತಾಲೂಕಿನ ತಡೋಳಾ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಅಪರಿಚಿತ ಕಾರೊಂದು ವೇಗವಾಗಿ ಬಂದು ಕುರಿಗಳ ಹಿಂಡಿಗೆ ಡಿಕ್ಕಿ ಹೊಡೆದ ಪರಿಣಾಮ 12 ಕುರಿಗಳು ಹಾಗೂ 3 ಕುರಿ ಮರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ.
ಮೃತ ಕುರಿಗಳು ವಿಜಯಪುರ ಜಿಲ್ಲೆಯ ಜ್ಯೋತಿಬಾ ಪಾಂಡು ಲೋಖಂಡೆ ಎಂಬುವವರಿಗೆ ಸೇರಿವೆ. ಜ್ಯೋತಿಬಾ ಅವರು ತಮ್ಮ ಜೀವನೋಪಾಯಕ್ಕಾಗಿ ಕುರಿ ಸಾಕಾಣಿಕೆ ಮಾಡುತ್ತಿದ್ದು, ಸುಮಾರು 700 ಕುರಿಗಳನ್ನು ಹುಮನಾಬಾದ್ ತಾಲೂಕು ವ್ಯಾಪ್ತಿಯಲ್ಲಿ ಮೇಯಿಸುತ್ತಿದ್ದರು.
ನಿನ್ನೆ ಸಂಜೆ ಕುರಿಗಳನ್ನು ಮೇಯಿಸಿಕೊಂಡು ರಸ್ತೆ ದಾಟಿಸುತ್ತಿದ್ದ ವೇಳೆ ಹುಮನಾಬಾದ್ ಕಡೆಯಿಂದ ವೇಗವಾಗಿ ಬಂದ ಕಾರು ಏಕಾಏಕಿ ಕುರಿಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಘಟನೆಯಲ್ಲಿ ಒಟ್ಟು 15 ಕುರಿಗಳು ಮೃತಪಟ್ಟಿದ್ದು, ಕುರಿಗಾಯಿ ಜ್ಯೋತಿಬಾ ಅವರಿಗೆ ಸುಮಾರು 3 ರಿಂದ 4 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಕುರಿಗಳೇ ತಮ್ಮ ಕುಟುಂಬದ ಜೀವನಾಧಾರವಾಗಿದ್ದವು. ಅವುಗಳ ಸಾವಿನಿಂದ ದೊಡ್ಡ ನಷ್ಟ ಉಂಟಾಗಿದೆ ಎಂದು ಜ್ಯೋತಿಬಾ ಪಾಂಡು ಲೋಖಂಡೆ ತಿಳಿಸಿದ್ದಾರೆ.
ಘಟನೆ ಬಳಿಕ ಸ್ಥಳೀಯರು ಹಾಗೂ ಕುರಿಗಾಯಿಗಳು ಮಾಹಿತಿ ನೀಡಿದ್ದು, ಅಪಘಾತಕ್ಕೆ ಕಾರಣವಾದ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.



