ಬೆಂಗಳೂರು: ಹುಡುಗಿಯರನ್ನು ಇಟ್ಟುಕೊಂಡು ಅಕ್ರಮ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ನಟೋರಿಯಸ್ ಪಿಂಪ್‌ವೊಬ್ಬನನ್ನು ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಚೇತನ್ ಕುಮಾರ್ ಅಲಿಯಾಸ್ ಮಂಗಳಮುಖಿ ಚೇತನ್ (40) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಪೀಣ್ಯ, ಬಾಗಲಗುಂಟೆ, ಸಿಸಿಬಿ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಪೊಲೀಸರ ಪ್ರಕಾರ, ಆರೋಪಿ ಚೇತನ್ ಮಂಗಳಮುಖಿ ವೇಷ ಧರಿಸಿ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಎನ್ನಲಾಗಿದೆ. ಹೊರ ರಾಜ್ಯಗಳಿಂದ ಯುವತಿಯರನ್ನು ಕರೆತಂದು ದಂಧೆ ನಡೆಸುತ್ತಿದ್ದ ಆರೋಪವೂ ಆತನ ಮೇಲಿದೆ.
ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಚೇತನ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಈ ನಡುವೆ ಪೀಣ್ಯ ಪ್ರದೇಶದ ರೂಮ್‌ವೊಂದರಲ್ಲಿ ಆರೋಪಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಾದನಾಯಕನಹಳ್ಳಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.



