ಬೆಂಗಳೂರು: ರಾಜ್ಯದಲ್ಲಿ ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ಹಿತದೃಷ್ಟಿಯಿಂದ ಹಾಫ್ ಹೆಲ್ಮೆಟ್ (Half Helmet) ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಸಾರಿಗೆ ಇಲಾಖೆ (Transport Department) ಅಧಿಕೃತ ಆದೇಶ ಹೊರಡಿಸಿದೆ.
ಇನ್ಮುಂದೆ ದ್ವಿಚಕ್ರ ವಾಹನ ಚಾಲಕರು ಹಾಗೂ ಹಿಂಬದಿ ಸವಾರರು ಸುರಕ್ಷಿತವಲ್ಲದ ಹಾಫ್ ಹೆಲ್ಮೆಟ್ಗಳನ್ನು ಬಳಸುವಂತಿಲ್ಲ. ಕಡ್ಡಾಯವಾಗಿ ಭಾರತೀಯ ಮಾನಕ ಸಂಸ್ಥೆ (BIS) ಅಥವಾ ISI ಗುಣಮಟ್ಟದ ಪ್ರಮಾಣಪತ್ರ ಹೊಂದಿರುವ ಹೆಲ್ಮೆಟ್ಗಳನ್ನು ಮಾತ್ರ ಧರಿಸಬೇಕೆಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.
ಒಂದು ವೇಳೆ ಸರ್ಕಾರದ ಈ ಆದೇಶವನ್ನು ಉಲ್ಲಂಘಿಸಿ ಹಾಫ್ ಹೆಲ್ಮೆಟ್ ಧರಿಸಿ ವಾಹನ ಚಲಾಯಿಸಿದರೆ, ಸವಾರರ ವಿರುದ್ಧ ನಿಯಮಾನುಸಾರ ದಂಡ ವಿಧಿಸಲಾಗುವುದು ಎಂದು ಇಲಾಖೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.
ಕೇವಲ ವಾಹನ ಸವಾರರಷ್ಟೇ ಅಲ್ಲದೆ, ಮಾನದಂಡ ರಹಿತ ಹಾಗೂ ಅವೈಜ್ಞಾನಿಕ ಹಾಫ್ ಹೆಲ್ಮೆಟ್ಗಳನ್ನು ತಯಾರಿಸುವ ತಯಾರಕರು (Manufacturers) ಹಾಗೂ ಅದನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಮಾರಾಟಗಾರರ ಮೇಲೆಯೂ ಕಾನೂನು ರೀತಿಯ ತೀವ್ರ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.



