ಕಲಬುರಗಿ: ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಹಾಗೂ ತವರಿನಿಂದ ಹಣ ತರುವಂತೆ ಕಿರುಕುಳ ನೀಡಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಭೀಕರ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ಪ್ರಕರಣವನ್ನು ಆತ್ಮಹತ್ಯೆ ಎಂದು ಬಿಂಬಿಸಲು ಆರೋಪಿ ಪತಿ ಯತ್ನಿಸಿದ್ದ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಚಿಂಚೋಳಿ ಪಟ್ಟಣದ ಪ್ರಿಯಾಂಕಾ ಹಡಪದ್ (30) ಮೃತಪಟ್ಟ ದುರ್ದೈವಿ ಮಹಿಳೆ. ವೃತ್ತಿಯಲ್ಲಿ ವಕೀಲನಾಗಿದ್ದ ಸೂರ್ಯಕಾಂತ್ ಕೊಲೆ ಮಾಡಿದ ಆರೋಪಿ. ಮೃತ ಪ್ರಿಯಾಂಕಾ ಹಾಗೂ ಸೂರ್ಯಕಾಂತ್‌ಗೆ ಮಕ್ಕಳಾಗಿರಲಿಲ್ಲ ಎನ್ನಲಾಗಿದೆ. ಇದೇ ವಿಚಾರಕ್ಕೆ ಹಾಗೂ ತವರಿನಿಂದ ಹೆಚ್ಚುವರಿ ಹಣ ತರುವಂತೆ ಸೂರ್ಯಕಾಂತ್ ನಿರಂತರವಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಪ್ರಿಯಾಂಕಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಘಟನೆ ನಡೆದ ದಿನವೂ ಇದೇ ವಿಚಾರವಾಗಿ ಇಬ್ಬರ ನಡುವೆ ತೀವ್ರ ಗಲಾಟೆ ನಡೆದಿದ್ದು, ಆಕ್ರೋಶಗೊಂಡ ಸೂರ್ಯಕಾಂತ್ ಪತ್ನಿ ಪ್ರಿಯಾಂಕಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ, ಪ್ರಕರಣದಿಂದ ತಪ್ಪಿಸಿಕೊಳ್ಳಲು ಇದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಸೂರ್ಯಕಾಂತ್ ಯತ್ನಿಸಿದ್ದ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಚಿಂಚೋಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತ ಪ್ರಿಯಾಂಕಾ ಕುಟುಂಬಸ್ಥರು ನೀಡಿದ ದೂರಿನನ್ವಯ ಪೊಲೀಸರು ಆರೋಪಿ ಸೂರ್ಯಕಾಂತ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



