ನವದೆಹಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿರುವ ಪ್ರಕ್ರಿಯೆಯನ್ನು ಪ್ರಶ್ನಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯಿತು.
ವಿಜಯಲಕ್ಷ್ಮೀ ಪರ ಹಿರಿಯ ವಕೀಲ ನಾಗಮುತ್ತು ವಾದ ಮಂಡಿಸಿ, ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಮಾಡುವ ಪ್ರಕ್ರಿಯೆಯಲ್ಲಿ ಕಾನೂನಾತ್ಮಕ ಲೋಪಗಳಿವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ಆರೋಪಿಯಾಗಿದ್ದ ಪ್ರದೋಷ್ ತಮ್ಮ ವಕೀಲರ ಮೂಲಕ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರಾಸಿಕ್ಯೂಷನ್ ಒಪ್ಪಿಗೆ ನೀಡಿದ್ದು, ವಿಚಾರಣಾ ನ್ಯಾಯಾಲಯವೂ ಅನುಮತಿ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ಹೈಕೋರ್ಟ್ ಕೆಳ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದ ಹಿನ್ನೆಲೆಯಲ್ಲಿ ಇದೀಗ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ ಎಂದು ವಾದಿಸಲಾಯಿತು.
ಪ್ರದೋಷ್ ಅವರಿಂದ ಸೆಕ್ಷನ್ 164ರ ಅಡಿಯಲ್ಲಿ ಯಾವುದೇ ಹೇಳಿಕೆ ದಾಖಲಿಸಿಲ್ಲ. ಸೆಕ್ಷನ್ 161ರ ಅಡಿಯಲ್ಲೂ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆದಿಲ್ಲ. ಜೊತೆಗೆ ಸೆಕ್ಷನ್ 364ರ ಪ್ರಕ್ರಿಯೆಯನ್ನೂ ಪಾಲಿಸಲಾಗಿಲ್ಲ ಎಂದು ವಿಜಯಲಕ್ಷ್ಮೀ ಪರ ವಕೀಲರು ವಾದಿಸಿದರು.
ಯಾವುದೇ ಹಿಂದಿನ ಹೇಳಿಕೆ ಇಲ್ಲದಿದ್ದರೂ ವಕೀಲರ ಮೂಲಕ ಸಲ್ಲಿಸಿದ ಅರ್ಜಿಯನ್ನು ಆಧರಿಸಿ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲಾಗಿದೆ. ಹೀಗಾಗಿ ಈ ಪ್ರಕ್ರಿಯೆಯಲ್ಲಿ ಕಾನೂನಾತ್ಮಕ ತೊಡಕುಗಳಿವೆ ಎಂದು ನ್ಯಾಯಾಲಯದ ಮುಂದೆ ವಾದ ಮಂಡಿಸಲಾಯಿತು. ತಮ್ಮ ವಾದಕ್ಕೆ ಪೂರಕವಾಗಿ ಸಂಬಂಧಿತ ಪ್ರಕರಣಗಳ ಕೆಲವು ತೀರ್ಪುಗಳನ್ನೂ ಹಿರಿಯ ವಕೀಲ ನಾಗಮುತ್ತು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದರು.
ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿರುವುದಕ್ಕೆ ತಡೆ ನೀಡಬೇಕು ಎಂದು ವಿಜಯಲಕ್ಷ್ಮೀ ಪರ ವಕೀಲರು ಮನವಿ ಮಾಡಿದರು. ವಾದ ಆಲಿಸಿದ ಸುಪ್ರೀಂಕೋರ್ಟ್, ಪ್ರಕರಣಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ಹೀಗಾಗಿ ಪ್ರದೋಷ್ ಮಾಫಿ ಸಾಕ್ಷಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಮುಂದಿನ ವಿಚಾರಣೆ ಮಹತ್ವ ಪಡೆದುಕೊಂಡಿದೆ.



