ಮೈಸೂರು: ಶಾಲೆಯಿಂದ ವಾಪಸ್ ಬಂದಿದ್ದ ಅಣ್ಣನನ್ನು ಕರೆದುಕೊಳ್ಳಲು ತಾಯಿಯೊಂದಿಗೆ ಹೋಗಿದ್ದ 1.7 ವರ್ಷದ ಪುಟ್ಟ ಮಗುವಿನ ಮೇಲೆ ಶಾಲಾ ವಾಹನ ಹರಿದು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಉದ್ಯೂರು ಗ್ರಾಮದಲ್ಲಿ ನಡೆದಿದೆ.
ಉದ್ಯೂರು ಗ್ರಾಮದ ಲತಿಕ್ಷಾ (1.7 ವರ್ಷ) ಶಾಲಾ ವಾಹನಕ್ಕೆ ಬಲಿಯಾದ ದುರ್ದೈವಿ ಕಂದಮ್ಮ. ಗ್ರಾಮದ ‘ಶಾಸ್ತ್ರಿ ಪಬ್ಲಿಕ್ ಸ್ಕೂಲ್’ ಶಾಲಾ ವಾಹನದಲ್ಲಿ ಮನೆಗೆ ಬಂದಿದ್ದ 4 ವರ್ಷದ ಬಾಲಕನನ್ನು ತಾಯಿ ವಾಹನದಿಂದ ಕೆಳಗಿಳಿಸಿಕೊಂಡಿದ್ದರು. ಈ ವೇಳೆ ವಾಹನದ ಪಕ್ಕದಲ್ಲೇ ನಿಂತಿದ್ದ 1.7 ವರ್ಷದ ಲತಿಕ್ಷಾಗೆ ಶಾಲಾ ವಾಹನ ಡಿಕ್ಕಿ ಹೊಡೆದಿದೆ. ವಾಹನದ ಚಕ್ರ ಬಾಲಕಿಯ ಮೇಲೆಯೇ ಹರಿದ ಪರಿಣಾಮ ತೀವ್ರವಾಗಿ ಗಾಯಗೊಂಡ ಮಗು ಸ್ಥಳದಲ್ಲೇ ಕೊನೆಯುಸಿರೆಳೆದಿದೆ.
ವಾಹನ ಚಾಲಕ ಸಿದ್ದರಾಜು (42) ಎಂಬಾತನ ಅತಿಯಾದ ವೇಗ ಹಾಗೂ ಅಜಾಗರೂಕ ಚಾಲನೆಯೇ ಈ ಭೀಕರ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಕಂದಮ್ಮನನ್ನು ಕಳೆದುಕೊಂಡು ಕಣ್ಣೀರಿಡುತ್ತಿರುವ ಕುಟುಂಬಸ್ಥರು, ಚಾಲಕನ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



