ಕೊಪ್ಪಳ: ಕೊಪ್ಪಳದಲ್ಲಿ ಘೋರ ದುರಂತವೊಂದು ನಡೆದಿದ್ದು, ಪ್ರಿ ವೆಡ್ಡಿಂಗ್ ಫೋಟೋಶೂಟ್‌ಗೆ ಹೋಗಿದ್ದ ಜೋಡಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಬಳಿ ನಡೆದಿದೆ. ಕರಿಯಪ್ಪ ಮಡಿವಾಳರ (26) ಮತ್ತು ಕವಿತಾ (19) ಮೃತ ದುರ್ಧೈವಿಗಳಾಗಿದ್ದು,
ಕೊಪ್ಪಳ ತಾಲೂಕಿನ ಹನುಮನಹಟ್ಟಿ ಗ್ರಾಮದ ಕರಿಯಪ್ಪ ಮಡಿವಾಳರ ಜೊತೆ ಕಾರಟಗಿ ತಾಲೂಕಿನ ಮುಷ್ಟೂರು ಗ್ರಾಮದ ಕವಿತಾ ಮದುವೆ ಇದೇ ತಿಂಗಳ 20ರಂದು ನಿಶ್ಚಯವಾಗಿತ್ತು. ಈ ಹಿನ್ನಲೆಯಲ್ಲಿ ನಿನ್ನೆ ಬೆಳಿಗ್ಗೆ ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿಕೊಂಡು ಬರ್ತಿದ್ದ ವೇಳೆ ಇವರ ಬೈಕ್ ಎದುರಿನಿಂದ ಬರ್ತಿದ್ದ ಲಾರಿಗೆ ಡಿಕ್ಕಿಯಾಗಿದೆ.
ಪಂಚರ್ ಆಗಿ ನಿಂತಿದ್ದ ಲಾರಿಯನ್ನು ಓವರ್ಟೇಕ್ ಮಾಡುವ ವೇಳೆ ಎದುರಿನಿಂದ ಬಂದ ಲಾರಿಗೆ ಬೈಕ್ ಡಿಕ್ಕಿಹೊಡೆದ ಪರಿಣಾಮ ಕವಿತಾ ಸ್ಥಳದಲ್ಲಿಯೇ ಮೃತಪಟ್ಟರೆ, ಕರಿಯಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣಬಿಟ್ಟಿದ್ದಾರೆ.
ಹೀಗಾಗಿ ಮದುವೆ ಸಂಭ್ರಮದಲ್ಲಿದ್ದ ಉಭಯ ಕುಟುಂಬಗಳು ಶೋಕ ಸಾಗರದಲ್ಲಿ ಮುಳುಗಿವೆ. ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲು ಮಾಡಿ, ತನಿಖೆ ಆರಂಭಿಸಿದ್ದಾರೆ.



