ಬೆಂಗಳೂರು: ನಟ ಧನ್ವೀರ್‌ಗೆ ಒಂದರ ಹಿಂದೆ ಮತ್ತೊಂದು ಸಂಕಷ್ಟ ಎದುರಾಗುತ್ತಿದೆ. ವಿಜಯಲಕ್ಷ್ಮಿ ಮತ್ತು ಧನ್ವೀರ್ ನಡುವಿನ ಜಟಾಪಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಹೆಚ್ಚಿನ ಕಾಲಾವಕಾಶ ಕೋರಿ ನಟ ಧನ್ವೀರ್ ಸಲ್ಲಿಸಿದ್ದ ಮನವಿಗೆ ಪೊಲೀಸರು ಸ್ಪಂದಿಸಿದ್ದಾರೆ. ಅದರಂತೆ ನವೆಂಬರ್ 12ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಎರಡನೇ ನೋಟಿಸ್ ನೀಡಿದ್ದಾರೆ. ಇದರ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನ ರಾಜಾತಿಥ್ಯ ವಿಡಿಯೋ ವೈರಲ್ ಪ್ರಕರಣದಲ್ಲಿಯೂ ಧನ್ವೀರ್‌ಗೆ ಮತ್ತಷ್ಟು ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ.
ವಿಜಯಲಕ್ಷ್ಮಿ ಮತ್ತು ಧನ್ವೀರ್ ನಡುವಿನ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸರು ಈ ಹಿಂದೆ ನೋಟಿಸ್ ಜಾರಿಗೊಳಿಸಿ, ನವೆಂಬರ್ 11ರೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನಿಗದಿತ ಸಮಯದಲ್ಲಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದ ಧನ್ವೀರ್, ಹೆಚ್ಚಿನ ಕಾಲಾವಕಾಶ ನೀಡುವಂತೆ ಪೊಲೀಸರಿಗೆ ಪತ್ರ ಬರೆದಿದ್ದರು.
ಧನ್ವೀರ್ ಅವರ ಮನವಿಯನ್ನು ಪರಿಗಣಿಸಿರುವ ಪೊಲೀಸರು ವಿಚಾರಣೆಯ ದಿನಾಂಕವನ್ನು ನವೆಂಬರ್ 12ಕ್ಕೆ ನಿಗದಿಪಡಿಸಿದ್ದಾರೆ. ಅಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಎರಡನೇ ನೋಟಿಸ್ ಜಾರಿಗೊಳಿಸಲಾಗಿದೆ. ಹೀಗಾಗಿ ಮುಂದಿನ ವಿಚಾರಣೆಯಲ್ಲಿ ಧನ್ವೀರ್ ನೀಡಲಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಇದರ ನಡುವೆಯೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲಾಗಿದೆ ಎನ್ನಲಾದ ವಿಡಿಯೋ ವೈರಲ್ ಪ್ರಕರಣದಲ್ಲಿಯೂ ನಟ ಧನ್ವೀರ್ ಹೆಸರು ಕೇಳಿಬಂದಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ಧನ್ವೀರ್ ಅವರ ಮೊಬೈಲ್ ಫೋನ್‌ಗೆ ಸಂಬಂಧಿಸಿದ ಮಹತ್ವದ ವಿಧಿವಿಜ್ಞಾನ ವರದಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ.
ಜೈಲಿನ ರಾಜಾತಿಥ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣದ ತನಿಖೆ ಕೈಗೊಂಡಿದ್ದ ಸಿಸಿಬಿ ಪೊಲೀಸರು, ವಿಡಿಯೋ ಹರಡುವಿಕೆಯಲ್ಲಿ ಧನ್ವೀರ್ ಅವರ ಪಾತ್ರವಿದೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಅವರ ಮೊಬೈಲ್ ಫೋನ್ ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿತ್ತು.
ಆದರೆ, ಪ್ರಾಥಮಿಕ ಪರಿಶೀಲನೆಯಲ್ಲಿ ಮೊಬೈಲ್‌ನಲ್ಲಿ ಸಂಬಂಧಿತ ವಿಡಿಯೋಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ಮೊಬೈಲ್‌ನಿಂದ ಅಳಿಸಲಾಗಿರುವ ಡೇಟಾವನ್ನು ಮರುಪಡೆಯುವ ಉದ್ದೇಶದಿಂದ ಫೋನ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿತ್ತು.
ಇದೀಗ ಮೊಬೈಲ್ ಡೇಟಾ ಮರುಪಡೆಯುವಿಕೆಗೆ ಸಂಬಂಧಿಸಿದ ವರದಿ ಸಿಸಿಬಿ ಪೊಲೀಸರ ಕೈ ಸೇರಿದೆ ಎನ್ನಲಾಗಿದೆ. ಧನ್ವೀರ್ ಅವರ ಮೊಬೈಲ್ ಮೂಲಕವೇ ವಿಡಿಯೋ ಹರಡಿರುವುದಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ತನಿಖಾ ಮೂಲಗಳಿಂದ ಮಾಹಿತಿ ದೊರೆತಿದೆ. ಆದರೆ, ಈ ಸಾಕ್ಷ್ಯಗಳ ಕುರಿತು ಅಧಿಕೃತವಾಗಿ ಸಂಪೂರ್ಣ ವಿವರಗಳು ಬಹಿರಂಗವಾಗಬೇಕಿದೆ.









