ವಾಷಿಂಗ್ಟನ್: ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರ ಆಹ್ವಾನದ ಮೇರೆಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಮೇ 13ರಿಂದ 15ರವರೆಗೆ ಚೀನಾಗೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.
ಸುಮಾರು ಒಂಬತ್ತು ವರ್ಷಗಳ ಬಳಿಕ ಅಮೆರಿಕ ಅಧ್ಯಕ್ಷರೊಬ್ಬರು ಚೀನಾಕ್ಕೆ ಭೇಟಿ ನೀಡುತ್ತಿರುವುದು ವಿಶೇಷ ಗಮನ ಸೆಳೆದಿದೆ. ಅಮೆರಿಕ-ಇಸ್ರೇಲ್-ಇರಾನ್ ನಡುವಿನ ದೀರ್ಘಾವಧಿಯ ಸಂಘರ್ಷ, ಜಾಗತಿಕ ಇಂಧನ ಬಿಕ್ಕಟ್ಟಿಗೆ ಕಾರಣವಾಗಿರುವ ಹಾರ್ಮುಜ್ ಜಲಸಂಧಿ ಸಮಸ್ಯೆ ಹಾಗೂ ತೈವಾನ್ ವಿಚಾರ ಸೇರಿದಂತೆ ಹಲವು ಸೂಕ್ಷ್ಮ ವಿಷಯಗಳಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಸಂದರ್ಭದಲ್ಲೇ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಅಮೆರಿಕದ ಪ್ರಧಾನ ಉಪ ಪತ್ರಿಕಾ ಕಾರ್ಯದರ್ಶಿ ಅನ್ನಾ ಕೆಲ್ಲಿ ನೀಡಿರುವ ಮಾಹಿತಿಯಂತೆ, ಅಧ್ಯಕ್ಷ ಟ್ರಂಪ್ ಬುಧವಾರ ಸಂಜೆ ಬೀಜಿಂಗ್ಗೆ ಆಗಮಿಸಲಿದ್ದಾರೆ. ಪ್ರವಾಸದ ವೇಳೆ ಟ್ರಂಪ್ ಮತ್ತು ಕ್ಸಿ ಜಿನ್ಪಿಂಗ್ ನಡುವೆ ದ್ವಿಪಕ್ಷೀಯ ಸಭೆ ನಡೆಯಲಿದ್ದು, ವಿವಿಧ ಜಾಗತಿಕ ಹಾಗೂ ಆರ್ಥಿಕ ವಿಚಾರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆಯಿದೆ.
ಸಭೆಯ ಬಳಿಕ ಟ್ರಂಪ್ ಬೀಜಿಂಗ್ನ ಪ್ರಸಿದ್ಧ ‘ಟೆಂಪಲ್ ಆಫ್ ಹೆವೆನ್’ಗೆ ಭೇಟಿ ನೀಡಲಿದ್ದು, ಅದೇ ದಿನ ಅಧಿಕೃತ ಔತಣಕೂಟವೂ ಆಯೋಜಿಸಲಾಗಿದೆ ಎಂದು ತಿಳಿಸಲಾಗಿದೆ.
ಶುಕ್ರವಾರವೂ ಉಭಯ ನಾಯಕರ ನಡುವೆ ಮಾತುಕತೆ ಮುಂದುವರೆಯಲಿದ್ದು, ಇದೇ ವರ್ಷದ ಅಂತ್ಯದೊಳಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅಮೆರಿಕ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಟ್ರಂಪ್ ಅವರ ಈ ಭೇಟಿಯ ವೇಳೆ ಉಭಯ ದೇಶಗಳ ನಡುವೆ ಮಹತ್ವದ ವ್ಯಾಪಾರ ಒಪ್ಪಂದಕ್ಕೂ ರೂಪುರೇಷೆ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.



