ತುಮಕೂರು: ಜಿಲ್ಲೆಯ ಏಕೈಕ ಜಿಲ್ಲಾ ಮಟ್ಟದ ಕ್ರೀಡಾಂಗಣಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೆಸರು ನಾಮಕರಣ ಮಾಡಿರುವುದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಮಹಾತ್ಮಾ ಗಾಂಧೀಜಿ ಹೆಸರಿನ ಬದಲಿಗೆ ಡಾ.ಜಿ.ಪರಮೇಶ್ವರ ಹೆಸರು ಇಟ್ಟಿರುವುದನ್ನು ಪ್ರತಿಪಕ್ಷ ಬಿಜೆಪಿ ತೀವ್ರವಾಗಿ ವಿರೋಧಿಸಿದೆ.
ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಈ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲಾಗಿದೆ. ಹೊರಾಂಗಣ ಕ್ರೀಡಾಂಗಣದ ಮುಂಭಾಗದಲ್ಲೇ ಒಳಾಂಗಣ ಸ್ಟೇಡಿಯಂ ಇದ್ದು, ಇದುವರೆಗೆ ಪ್ರತ್ಯೇಕ ನಾಮಫಲಕ ಇಲ್ಲದಿದ್ದರೂ ಅದನ್ನು ‘ಮಹಾತ್ಮಾ ಗಾಂಧಿ ಇಂಡೋರ್ ಸ್ಟೇಡಿಯಂ’ ಎಂದೇ ಕರೆಯಲಾಗುತ್ತಿತ್ತು.
ಆದರೆ ಮೂರು ದಿನಗಳ ಹಿಂದೆ ದಿಢೀರ್ ಆಗಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಅವರ ಹೆಸರನ್ನು ‘ಡಾ.ಜಿ.ಪರಮೇಶ್ವರ ಒಳಾಂಗಣ ಕ್ರೀಡಾ ಸಂಕೀರ್ಣ’ ಎಂದು ನಾಮಫಲಕ ಅಳವಡಿಸಲಾಗಿದೆ. ಇದರಿಂದ ಬಿಜೆಪಿ ಕಾರ್ಯಕರ್ತರಲ್ಲಿ ಆಕ್ರೋಶ ಭುಗಿಲೆದ್ದಿದೆ.
ಈ ವಿಚಾರ ವಿರೋಧಿಸಿ ಸೋಮವಾರ ಸಂಜೆ ಬಿಜೆಪಿಯ ನೂರಾರು ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ಕ್ರೀಡಾಂಗಣದ ಬಳಿ ಧರಣಿ ಕುಳಿತರು. ಪರಮೇಶ್ವರ್ ಹೆಸರಿನ ನಾಮಫಲಕ ತೆರವುಗೊಳಿಸಲು ಯತ್ನಿಸಿದ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಜಟಾಪಟಿ ನಡೆಯಿತು. ಬ್ಯಾರಿಕೇಡ್‌ಗಳನ್ನು ತಳ್ಳಿ ಒಳನುಗ್ಗಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನವಾಯಿತು. ಬಳಿಕ ಪೊಲೀಸರು ಬಿಜೆಪಿ ಮುಖಂಡರು ಸೇರಿದಂತೆ 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಈ ಸಂದರ್ಭ ಬಿಜೆಪಿ ಶಾಸಕ ಸುರೇಶ್ ಗೌಡ ಮಾತನಾಡಿ, ಇದು ಗೃಹ ಸಚಿವರ ಹಿಂಬಾಲಕರನ್ನು ಮೆಚ್ಚಿಸಲು ಮಾಡಿರುವ ಕಾರ್ಯ ಎಂದು ಆರೋಪಿಸಿದರು. ಈ ತಪ್ಪನ್ನು ಪರಮೇಶ್ವರ್ ಅವರೇ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಶಾಸಕ ಜ್ಯೋತಿ ಗಣೇಶ್ ಮಾತನಾಡಿ, ಸ್ಥಳೀಯ ಸಂಸ್ಥೆ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಠರಾವು ಪಡೆಯದೇ ಹೆಸರು ಬದಲಾವಣೆ ಮಾಡಿರುವುದು ಸರಿಯಲ್ಲ ಎಂದರು.
ಇದೇ ತಿಂಗಳ 16ರಿಂದ ಇದೇ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಒಲಂಪಿಕ್ ಕ್ರೀಡಾಕೂಟ ನಡೆಯಲಿದೆ. ಸರ್ಕಾರದ ಸ್ಪಷ್ಟ ಆದೇಶ ಇಲ್ಲದಿದ್ದರೂ ಅಧಿಕಾರಿಗಳು ಆತುರದಲ್ಲಿ ಮಹಾತ್ಮಾ ಗಾಂಧೀಜಿ ಹೆಸರನ್ನು ಬದಲಿಸಿ ಡಾ.ಜಿ.ಪರಮೇಶ್ವರ ಹೆಸರಿನ ನಾಮಫಲಕ ಅಳವಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರೇ ಮಧ್ಯಪ್ರವೇಶಿಸಿ ವಿವಾದಕ್ಕೆ ತೆರೆ ಎಳೆಯಬೇಕೆಂಬ ಒತ್ತಾಯ ಕೇಳಿಬರುತ್ತಿದೆ.



