ನವದೆಹಲಿ: ಪಾಕಿಸ್ತಾನಕ್ಕೆ ಭದ್ರತೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ ನಿವೃತ್ತ ಸೇನಾ ಯೋಧ ಸೇರಿದಂತೆ ಇಬ್ಬರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ.
ಕೇಂದ್ರ ತನಿಖಾ ಸಂಸ್ಥೆಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ. ಬಂಧಿತರ ಪೈಕಿ ಬಿಹಾರದ ಪೂರ್ವ ಚಂಪಾರಣ್ ಮೂಲದ 31 ವರ್ಷದ ಅಭಿಷೇಕ್ ಕುಮಾರ್ ಸಿಂಗ್ ಕೂಡ ಇದ್ದಾನೆ.
ಅಭಿಷೇಕ್ ಕುಮಾರ್ ಸಿಂಗ್ ಗುವಾಹಟಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಪಾಕಿಸ್ತಾನದ ಗುಪ್ತಚರ ಏಜೆಂಟ್‌ನ ಸೂಚನೆಯ ಮೇರೆಗೆ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂಬ ಶಂಕೆಯ ಮೇಲೆ ಆತನ ಕುರಿತು ತನಿಖೆ ನಡೆಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ತೇಜ್‌ಪುರ ಮೂಲದ ಗಜರಾಜ್ ಕಾರ್ಪ್ಸ್‌ನ ಮಿಲಿಟರಿ ಗುಪ್ತಚರ ವಿಭಾಗವು ಶಂಕಿತ ವ್ಯಕ್ತಿಯ ಕುರಿತ ಪ್ರಾಥಮಿಕ ಮಾಹಿತಿಯನ್ನು ಪೊಲೀಸರಿಗೆ ನೀಡಿತ್ತು ಎನ್ನಲಾಗಿದೆ. ಬಳಿಕ ಅಸ್ಸಾಂ ಎಸ್‌ಟಿಎಫ್ ಹಾಗೂ ಸೋನಿತ್‌ಪುರ ಪೊಲೀಸರು ಜಂಟಿಯಾಗಿ ಮಾಹಿತಿ ಕಲೆಹಾಕಿ ಕಾರ್ಯಾಚರಣೆ ನಡೆಸಿದ್ದಾರೆ.
ಕಾರ್ಯಾಚರಣೆ ವೇಳೆ ಆರೋಪಿಯ ಬಳಿಯಿದ್ದ ಮೊಬೈಲ್ ಫೋನ್, ಸಿಮ್ ಕಾರ್ಡ್‌ಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನು ಬಂಧಿತರಲ್ಲಿ ಒಬ್ಬ ನಿವೃತ್ತ ಸೇನಾ ಯೋಧನಾಗಿದ್ದು, ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮಾಹಿತಿ ನೀಡಿದ್ದಾರೆ.
ಪ್ರಕರಣದ ಕುರಿತು ತನಿಖೆ ಮುಂದುವರಿದಿದ್ದು, ಬಂಧಿತರು ಯಾರಿಗೆ ಮತ್ತು ಯಾವ ರೀತಿಯ ಮಾಹಿತಿ ರವಾನಿಸಿದ್ದಾರೆ ಎಂಬ ಬಗ್ಗೆ ತನಿಖಾ ಸಂಸ್ಥೆಗಳು ಹೆಚ್ಚಿನ ಮಾಹಿತಿ ಕಲೆಹಾಕುತ್ತಿವೆ.



