ಬಿಗ್ ಬಾಸ್ ಮನೆಯಿಂದ ‘ಅಗ್ನಿಪರೀಕ್ಷೆ’ ಸ್ಪರ್ಧಿ ಲಿಖಿತ್ ಗೊಂದಿ ಎಲಿಮಿನೇಟ್ ಆಗಿದ್ದಾರೆ.
ವಾರದ ಎಲಿಮಿನೇಷನ್‌ನಲ್ಲಿ ಸೇಫ್ ಆಗದೇ ಲಿಖಿತ್ ದೊಡ್ಮನೆಯಿಂದ ಹೊರಬಿದ್ದಿದ್ದಾರೆ. ಆಪ್ತ ಸ್ನೇಹಿತನ ಎಲಿಮಿನೇಷನ್‌ನಿಂದ ಮಾಡರ್ನ್ ಮಹಾಕವಿ ಮಂಜ ಭಾವುಕರಾಗಿದ್ದಾರೆ.
ಈ ವಾರ ಎಲಿಮಿನೇಷನ್‌ಗೆ ಯಶಸ್ ಕೃಷ್ಣ, ಮಂಜ, ಧನುಷ್, ಸಂಗೀತಾ, ಲಿಖಿತ್ ಗೊಂದಿ ಹಾಗೂ ಕಿರಣ್ ಶಾಸ್ತ್ರಿ ನಾಮಿನೇಟ್ ಆಗಿದ್ದರು. ಇವರಲ್ಲಿ ಯಶಸ್, ಮಂಜ ಹಾಗೂ ಧನುಷ್ ಮೊದಲ ಹಂತದಲ್ಲೇ ಸೇಫ್ ಆಗಿದ್ದರು. ಬಳಿಕ ಸಂಗೀತಾ, ಲಿಖಿತ್ ಹಾಗೂ ಕಿರಣ್ ಶಾಸ್ತ್ರಿ ಹಾಟ್ ಸೀಟ್‌ಗೆ ಬಂದಿದ್ದರು.
ಇದೇ ವೇಳೆ ಬಿಗ್ ಬಾಸ್ ಮನೆಯಲ್ಲಿ ವಿಭಿನ್ನ ರೀತಿಯಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆಸಲಾಯಿತು. ಮುಸುಕುಧಾರಿ ಶಸ್ತ್ರಸಜ್ಜಿತ ಕಮಾಂಡೋಗಳು ಮನೆಗೆ ಎಂಟ್ರಿ ಕೊಟ್ಟು ಹಾಟ್ ಸೀಟ್‌ನಲ್ಲಿದ್ದ ಮೂವರನ್ನೂ ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ದರು.
‘ವಾಪಸ್ ಮನೆಗೆ ಬಂದವರು ಸೇಫ್, ಬರದೇ ಇರುವವರು ಎಲಿಮಿನೇಟ್’ ಎಂದು ಕಿಚ್ಚ ಸುದೀಪ್ ತಿಳಿಸಿದರು. ಅದರಂತೆ ಮೊದಲು ಸಂಗೀತಾ, ಬಳಿಕ ಕಿರಣ್ ಶಾಸ್ತ್ರಿ ಮನೆಗೆ ವಾಪಸ್ ಬಂದರು. ಆದರೆ ಲಿಖಿತ್ ಮರಳಿ ಬಾರದ ಹಿನ್ನೆಲೆಯಲ್ಲಿ ಅವರು ಎಲಿಮಿನೇಟ್ ಆಗಿರುವುದು ಖಚಿತವಾಯಿತು.
ಲಿಖಿತ್ ಮನೆಯಿಂದ ಹೊರಹೋಗುತ್ತಿದ್ದಂತೆ ಆಪ್ತ ಸ್ನೇಹಿತನನ್ನು ಕಳೆದುಕೊಂಡ ನೋವಿನಲ್ಲಿ ಮಂಜ ಭಾವುಕರಾದರು. ‘ನಗು ನಗುತ್ತಲೇ ಬಂದು, ನಗುತ್ತಲೇ ಹೋದ’ ಎಂದು ಲಿಖಿತ್‌ರನ್ನು ನೆನೆದು ಬೇಸರ ವ್ಯಕ್ತಪಡಿಸಿದರು.
ಲಿಖಿತ್ ವಾಪಸ್ ಬಂದ ಬಳಿಕ ಇಬ್ಬರೂ ಒಟ್ಟಿಗೆ ಚಿಕನ್ ತಿನ್ನಬೇಕು ಎಂದು ಮಂಜ ಆಸೆಪಟ್ಟಿದ್ದರು. ಆದರೆ ಲಿಖಿತ್ ಎಲಿಮಿನೇಟ್ ಆಗಿದ್ದರಿಂದ ಅವರ ನಿರೀಕ್ಷೆ ನಿರಾಸೆಯಾಯಿತು. ಈ ವೇಳೆ ಮನೆಯ ಇತರ ಸ್ಪರ್ಧಿಗಳು ಮಂಜನನ್ನು ಸಮಾಧಾನಪಡಿಸಿದರು.
ಇನ್ನೊಂದೆಡೆ, ಎಲಿಮಿನೇಷನ್‌ಗೂ ಮುನ್ನ ‘ಯಾರು ಮನೆಯಿಂದ ಹೊರಹೋಗಬೇಕು?’ ಎಂದು ಕಿಚ್ಚ ಸುದೀಪ್ ಸ್ಪರ್ಧಿಗಳನ್ನು ಕೇಳಿದ್ದರು. ಈ ವೇಳೆ ಬಹುತೇಕ ಸ್ಪರ್ಧಿಗಳು ಯಶಸ್ ಕೃಷ್ಣ ಅವರ ಹೆಸರನ್ನು ಹೇಳಿದ್ದರು. ಆದರೆ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಮೊದಲು ಸೇಫ್ ಆಗುವ ಮೂಲಕ ಯಶಸ್ ಎಲ್ಲರ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದರು. ಕೊನೆಗೆ ಲಿಖಿತ್ ಗೊಂದಿ ದೊಡ್ಮನೆಯಿಂದ ಹೊರಬಿದ್ದಿದ್ದಾರೆ.



