ಮಾಸ್ಕೋ: ರಷ್ಯಾದ ಟಾಟರ್ಸ್ತಾನ್ ಪ್ರದೇಶದ ಮೇಲೆ ಉಕ್ರೇನ್ ನಡೆಸಿದ ಭೀಕರ ಡ್ರೋನ್ ದಾಳಿಯಲ್ಲಿ ಮಗು ಸೇರಿದಂತೆ 13 ಮಂದಿ ಮೃತಪಟ್ಟಿದ್ದು, 75 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಬಳಿಕ ಉಕ್ರೇನ್ ನಡೆಸಿದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದಾಗಿದೆ ಎಂದು ಹೇಳಲಾಗಿದೆ.
ಮಧ್ಯ ರಷ್ಯಾದ ಟಾಟರ್ಸ್ತಾನ್ ಪ್ರದೇಶವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ. ದಾಳಿಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಘಟನಾ ಸ್ಥಳದಿಂದ ಮುಗಿಲೆತ್ತರಕ್ಕೆ ದಟ್ಟ ಹೊಗೆ ಏಳುತ್ತಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ.
ಉಕ್ರೇನ್ ಕೂಡ ದಾಳಿಯನ್ನು ದೃಢಪಡಿಸಿದ್ದು, ತನ್ನ ಗಡಿಯಿಂದ 1,000 ಕಿಲೋಮೀಟರ್‌ಗೂ ಹೆಚ್ಚು ದೂರದಲ್ಲಿರುವ ಕೈಗಾರಿಕಾ ನಗರ ನಿಜ್ನೆಕಾಮ್ಸ್ಕ್‌ನಲ್ಲಿರುವ ತೈಲ ಸಂಸ್ಕರಣಾಗಾರವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.
ರಷ್ಯಾದ ಮಿಲಿಟರಿ ಸಾಮರ್ಥ್ಯವನ್ನು ಕುಗ್ಗಿಸುವ ಉದ್ದೇಶದಿಂದ ತೈಲ ಘಟಕಗಳನ್ನು ನಿಯಂತ್ರಿಸುವ ಟನೆಕೊ ಸಂಸ್ಕರಣಾಗಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಉಕ್ರೇನ್‌ನ ಜನರಲ್ ಸ್ಟಾಫ್ ಹೇಳಿದೆ ಎಂದು ವರದಿಯಾಗಿದೆ.
ರಷ್ಯಾದ ತನಿಖಾ ಸಮಿತಿ, ಉಕ್ರೇನ್ ನಡೆಸಿದ ದಾಳಿಯಲ್ಲಿ ಮೃತಪಟ್ಟವರಲ್ಲಿ ಒಂದು ಮಗು ಕೂಡ ಸೇರಿದೆ ಎಂದು ತಿಳಿಸಿದೆ. ಇದೇ ವೇಳೆ, ರಾತ್ರಿಯಿಡೀ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 465 ಉಕ್ರೇನ್ ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ರಷ್ಯಾ ಹೇಳಿಕೊಂಡಿದೆ.
ಈ ವರ್ಷ ರಷ್ಯಾ ಮತ್ತು ಉಕ್ರೇನ್ ಎರಡೂ ಪರಸ್ಪರ ದಾಳಿಗಳನ್ನು ಗಣನೀಯವಾಗಿ ಹೆಚ್ಚಿಸಿವೆ. ಇದರ ಪರಿಣಾಮವಾಗಿ ನಾಗರಿಕರ ಸಾವು-ನೋವು ಹೆಚ್ಚಾಗುತ್ತಿರುವ ಬಗ್ಗೆ ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ಇದೇ ವೇಳೆ, ಸೋಮವಾರ ರಷ್ಯಾ ಕೂಡ ಉಕ್ರೇನ್ ಮೇಲೆ ಮಾರಕ ದಾಳಿ ನಡೆಸಿದೆ. ಈಶಾನ್ಯ ಉಕ್ರೇನ್‌ನ ಖಾರ್ಕಿವ್ ಪ್ರದೇಶದ ಗ್ರಾಮವೊಂದರ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಐವರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಎರಡು ತಿಂಗಳ ಅವಧಿಯಲ್ಲಿ ಉಕ್ರೇನ್‌ನ ರಾಜಧಾನಿ ಕೈವ್‌ನಲ್ಲಿರುವ ಅಪಾರ್ಟ್‌ಮೆಂಟ್ ಕಟ್ಟಡಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿಗಳಲ್ಲೂ ಹಲವಾರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮುಂದುವರಿದಿರುವ ಬೆನ್ನಲ್ಲೇ ಎರಡೂ ದೇಶಗಳು ದಾಳಿಗಳ ತೀವ್ರತೆಯನ್ನು ಹೆಚ್ಚಿಸಿರುವುದು ನಾಗರಿಕರ ಸುರಕ್ಷತೆ ಕುರಿತು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.



