ಬೆಂಗಳೂರು: ಮುಖ್ಯಮಂತ್ರಿ ನಿವಾಸದ ಬಳಿಯೇ ಬಾಂಬ್ ಬೆದರಿಕೆ ಹಾಕಿದ ವಿಚಿತ್ರ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆಟೋ ಬುಕ್ ಮಾಡಿ ಚಾಲಕನ ಮೂಲಕ ಪೊಲೀಸರಿಗೇ ಕರೆ ಮಾಡಿಸಿದ ವ್ಯಕ್ತಿಯೊಬ್ಬ, ಸಿಎಂ ನಿವಾಸ ಹಾಗೂ ವಿಧಾನಸೌಧದಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿ ಆತಂಕ ಸೃಷ್ಟಿಸಿದ್ದಾನೆ.
ನಮ್ಮ ಯಾತ್ರಿ ಆ್ಯಪ್ನಲ್ಲಿ ಆಟೋ ಬುಕ್ ಮಾಡಿದ್ದ ಕಾರ್ತಿಕ್!
ಕಾರ್ತಿಕ್ ಎಂಬಾತ ನಮ್ಮ ಯಾತ್ರಿ ಆ್ಯಪ್ ಮೂಲಕ ಆಟೋ ಬುಕ್ ಮಾಡಿದ್ದ. ಮುಖ್ಯಮಂತ್ರಿ ನಿವಾಸದ ಬಳಿ ಬರುವಂತೆ ಆಟೋ ಚಾಲಕ ಭಗವಂತರಾಯನಿಗೆ ಸೂಚಿಸಿದ್ದ. ಅದರಂತೆ ಚಾಲಕ ನಿಗದಿತ ಸ್ಥಳಕ್ಕೆ ಬಂದಿದ್ದಾನೆ. ಬಳಿಕ ಕಾರ್ತಿಕ್ಗೆ ಕರೆ ಮಾಡಿ ಸ್ಥಳಕ್ಕೆ ಬಂದಿರುವುದಾಗಿ ಮಾಹಿತಿ ನೀಡಿದ್ದಾನೆ.
ಈ ವೇಳೆ ಕಾರ್ತಿಕ್ ಅಲ್ಲಿದ್ದ ಪೊಲೀಸರಿಗೆ ಫೋನ್ ನೀಡುವಂತೆ ಆಟೋ ಚಾಲಕನಿಗೆ ಹೇಳಿದ್ದಾನೆ. ಚಾಲಕ ಪೊಲೀಸರಿಗೆ ಮೊಬೈಲ್ ನೀಡಿದಾಗ, ಸಿಎಂ ಮನೆ ಹಾಗೂ ವಿಧಾನಸೌಧಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲ, ಮುಖ್ಯಮಂತ್ರಿ ಬೆಂಗಾವಲು ವಾಹನಗಳ ಸಂಚಾರದ ವೇಳೆ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಹೇಳಿದ್ದಾನೆ ಎನ್ನಲಾಗಿದೆ.
ಆಟೋ ಪರಿಶೀಲಿಸಿದ ಪೊಲೀಸರು:
ಫೋನ್ನಲ್ಲಿ ಬಂದ ಬೆದರಿಕೆ ಮಾಹಿತಿ ಕೇಳಿದ ಪೊಲೀಸರು ತಕ್ಷಣ ಆಟೋವನ್ನು ಪರಿಶೀಲನೆ ನಡೆಸಿದ್ದಾರೆ. ಈ ಮೂಲಕ ಆಟೋ ಬುಕ್ ಮಾಡಿದ್ದ ವ್ಯಕ್ತಿಯ ವಿಚಿತ್ರ ಕೃತ್ಯ ಬೆಳಕಿಗೆ ಬಂದಿದೆ. ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಸದ್ಯ ಪೊಲೀಸರಿಗೆ ಬೆದರಿಕೆ ಕರೆ ಮಾಡಿದ್ದ ಕಾರ್ತಿಕ್ ಎಂಬಾತನಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.









