ಉಡುಪಿ: ಉಪಯೋಗಕ್ಕೆ ಅನರ್ಹವಾದ ತುಪ್ಪವನ್ನು ದೇವಾಲಯಕ್ಕೆ ಬಳಸಿದ್ದೀರಿ. ಇಂತಹ ತುಪ್ಪ ತಯಾರಿಸುವ ಅಡ್ಡಗಳನ್ನು ಕಂಡುಹಿಡಿದು ತನಿಖೆ ನಡೆಸುವುದು ಸರ್ಕಾರದ ಕರ್ತವ್ಯ ಎಂದು ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ ಹೇಳಿದ್ದಾರೆ. ತಿರುಪತಿ ಲಡ್ಡು ವಿವಾದದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಿರುಪತಿಯ ಶ್ರೀನಿವಾಸ ದೇವರು, ಗೋವಿನ ರಕ್ಷಣೆಗೆ ಅವತರಿಸಿದವ. ಕ್ಷೇತ್ರದಲ್ಲಿ ಹಸು ಹುತ್ತಕ್ಕೆ ಹಾಲು ಎರೆಯುತ್ತಿತ್ತಂತೆ. ಮಾಲೀಕ ಹಸುವಿನ ಮೂಲಕ ಹುತ್ತವನ್ನು ಹೊಡೆಯಲು ಬಂದನಂತೆ.
ಆಗ ಹುತ್ತದಿಂದ ಮೇಲೆ ಬಂದ ಶ್ರೀನಿವಾಸ ಮಾಲೀಕನ ಏಟಿಗೆ ಮೈಯೊಡ್ಡಿದನಂತೆ. ಹಸುವನ್ನು ರಕ್ಷಿಸಿದ ಶ್ರೀನಿವಾಸ ಅನ್ನೋದು ಇತಿಹಾಸ. ಅಂತಹ ಶ್ರೀನಿವಾಸ ದೇವರಿಗೆ ಹಸುವಿನ ಕೊಬ್ಬಿನ ಪ್ರಸಾದ ನೀಡಿದ್ದೀರಿ. ಇದೊಂದು ಬಹುದೊಡ್ಡ ಅಪರಾಧವಾಗಿದೆ. ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲಿನ ಹಲ್ಲೆ ಇದಾಗಿದೆ. ಮನೆಗಳಲ್ಲಿ ಕೂಡ ಇಂತಹ ತುಪ್ಪ ಬಳಸುವುದಿಲ್ಲ. ಉಪಯೋಗಕ್ಕೆ ಅನರ್ಹವಾದ ತುಪ್ಪವನ್ನು ದೇವಾಲಯಕ್ಕೆ ಬಳಸಿದ್ದೀರಿ. ಇಂತಹ ತುಪ್ಪ ತಯಾರಿಸುವ ಅಡ್ಡಗಳನ್ನು ಕಂಡುಹಿಡಿದು ತನಿಖೆ ನಡೆಸುವುದು ಸರ್ಕಾರದ ಕರ್ತವ್ಯ ಎಂದರು.



