ಮಂಗಳೂರು: ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ಬಳಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ತಡರಾತ್ರಿ ಅಮಾನವೀಯ ಘಟನೆ ನಡೆದಿದೆ.
ವ್ಯಕ್ತಿಯೋರ್ವ ದೇಗುಲಕ್ಕೆ ನುಗ್ಗಿ ದಾಂಧಲೆ ನಡೆಸಿ ದೇವರ ಮೂರ್ತಿಯನ್ನು ಭಗ್ನಗೊಳಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಸ್ಥಳೀಯ ನಿವಾಸಿ ಅಜೇಯ್ ಎಂಬಾತ ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ಮೊದಲು ದೇವಸ್ಥಾನದ ಕೆರೆಗೆ ಹಾರಿದ ಆತ, ನಂತರ ಹೆಂಚು ತೆಗೆದು ಒಳನುಗ್ಗಿದ್ದಾನೆ. ದೇಗುಲದ ಒಳಗಿದ್ದ ಪೂಜಾ ಪರಿಕರಗಳು ಹಾಗೂ ದೈವದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾನೆ. ಬಳಿಕ ದೇವರ ಮೂರ್ತಿಯನ್ನು ಹಾನಿಗೊಳಿಸಿದ್ದಾನೆ ಎಂದು ತಿಳಿದುಬಂದಿದೆ.
ಅಜೇಯ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಮಾನಸಿಕ ಅಸ್ವಸ್ಥತೆಯ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



