ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯದ ಎಲ್ಲಾ ಮದರಸಾಗಳಲ್ಲಿ ಬೆಳಗಿನ ಪ್ರಾರ್ಥನಾ ಸಭೆಯ ವೇಳೆ ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸಿ ಹೊಸ ಆದೇಶ ಹೊರಡಿಸಿದೆ. ಈ ನಿಯಮವನ್ನು ತಕ್ಷಣದಿಂದಲೇ ಜಾರಿಗೆ ತರಲಾಗಿದೆ ಎಂದು ತಿಳಿದುಬಂದಿದೆ.
ರಾಜ್ಯ ಶಿಕ್ಷಣ ಇಲಾಖೆಯ ಪ್ರಧಾನ ಕಚೇರಿಯಾದ ‘ಬಿಕಾಶ್ ಭವನ’ ಹೊರಡಿಸಿರುವ ನಿರ್ದೇಶನದ ಪ್ರಕಾರ, ಮದರಸಾ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮದರಸಾಗಳು, ಶಿಶು ಶಿಕ್ಷಣ ಕೇಂದ್ರಗಳು (SSK) ಹಾಗೂ ಮಾಧ್ಯಮಿಕ್ ಶಿಕ್ಷಣ ಕೇಂದ್ರಗಳು (MSK) ಪ್ರತಿದಿನ ತರಗತಿಗಳು ಆರಂಭವಾಗುವ ಮೊದಲು ನಡೆಯುವ ಪ್ರಾರ್ಥನಾ ಸಭೆಯಲ್ಲಿ ‘ವಂದೇ ಮಾತರಂ’ ಹಾಡಬೇಕು ಎಂದು ಸೂಚಿಸಲಾಗಿದೆ.
ಮದರಸಾ ಶಿಕ್ಷಣ ಇಲಾಖೆಯ ನಿರ್ದೇಶಕರು ಈ ಆದೇಶವನ್ನು ಹೊರಡಿಸಿದ್ದು, ಅದರ ಪ್ರತಿಯನ್ನು ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು, ಜಿಲ್ಲಾ ಶಿಕ್ಷಣಾಧಿಕಾರಿಗಳು, ಪಶ್ಚಿಮ ಬಂಗಾಳ ಮದರಸಾ ಶಿಕ್ಷಣ ಮಂಡಳಿ ಹಾಗೂ ಸಂಬಂಧಿತ ಇಲಾಖೆಗಳಿಗೂ ರವಾನಿಸಲಾಗಿದೆ. ಸಕ್ಷಮ ಅಧಿಕಾರಿಗಳ ಅನುಮೋದನೆ ಪಡೆದ ಬಳಿಕವೇ ಈ ಆದೇಶ ಜಾರಿಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಇದಕ್ಕೂ ಮೊದಲು ರಾಜ್ಯದ ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ತರಗತಿಗಳು ಆರಂಭವಾಗುವ ಮುನ್ನ ರಾಷ್ಟ್ರಗೀತೆ ಹಾಡುವಂತೆ ಸರ್ಕಾರ ನಿರ್ದೇಶನ ನೀಡಿತ್ತು. ಇದೀಗ ಅದೇ ನಿಯಮವನ್ನು ಮದರಸಾಗಳಿಗೂ ವಿಸ್ತರಿಸಲಾಗಿದೆ.
ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ, ವಿದ್ಯಾರ್ಥಿಗಳು ‘ಜನ ಗಣ ಮನ’ ರಾಷ್ಟ್ರಗೀತೆಯೊಂದಿಗೆ ‘ವಂದೇ ಮಾತರಂ’ ಹಾಡಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.



