ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇಂಧನ ದರ ಏರಿಕೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೆರಿಗೆ ಇಳಿಕೆ ಮಾಡುತ್ತದೆಯೇ ಎಂಬ ಪ್ರಶ್ನೆಗೆ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಇಂಧನ ದರ ಹೆಚ್ಚಿಸಿದಾಗ ನೀವು ಪ್ರಶ್ನೆ ಕೇಳುವುದಿಲ್ಲ. ಆದರೆ ನಾವು ತೆರಿಗೆ ಕಡಿಮೆ ಮಾಡುತ್ತೀರಾ ಎಂದು ಮಾತ್ರ ಕೇಳುತ್ತೀರಿ. ಅವರು ಯಾಕೆ ಬೆಲೆ ಏರಿಸಿದ್ದಾರೆ ಎಂದು ಕೇಳುವುದಿಲ್ಲ ಎಂದು ಸಿಎಂ ಹೇಳಿದರು.
ಇದೇ ವೇಳೆ ಹಿಂದಿನ ಯುಪಿಎ ಸರ್ಕಾರದ ಅವಧಿಯ ದರಗಳನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಪೆಟ್ರೋಲ್ ದರ 70 ರೂ., ಡೀಸೆಲ್ 48 ರೂ. ಇತ್ತು. ಗ್ಯಾಸ್ ಸಿಲಿಂಡರ್ ದರ 414 ರೂ. ಇತ್ತು. ಈಗ ಎಲ್ಲದರ ಬೆಲೆ ಎಷ್ಟಾಗಿದೆ? ಜನರು ಯಾರು ಹೆಚ್ಚು ಬೆಲೆ ಏರಿಸಿದ್ದಾರೆ ಎಂದು ನೋಡಬೇಕು, ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.
ರಾಜ್ಯ ಸರ್ಕಾರ ಜನತೆಗೆ ನೆರವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ ದರ ಹೆಚ್ಚಿಸಿದರೆ ನಮ್ಮನ್ನೇ ತೆರಿಗೆ ಕಡಿಮೆ ಮಾಡಿ ಎಂದು ಕೇಳುತ್ತೀರಾ? ನಿಮ್ಮ ಪ್ರಶ್ನೆಗಳಲ್ಲೇ ನೀವು ಕೇಂದ್ರ ಸರ್ಕಾರದ ಪರವಾಗಿದ್ದೀರಿ ಎಂಬುದು ಗೊತ್ತಾಗುತ್ತದೆ ಎಂದು ಮಾಧ್ಯಮಗಳ ಮೇಲೂ ಅಸಮಾಧಾನ ವ್ಯಕ್ತಪಡಿಸಿದರು.



