ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ರಾಜ್ಯ ತೆರಿಗೆಯನ್ನು ಕಡಿತ ಮಾಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇಂಧನ ಬೆಲೆ ಏರಿಕೆ ಹಿನ್ನೆಲೆ ರಾಜ್ಯ ಸರ್ಕಾರ ತೆರಿಗೆ ಇಳಿಕೆ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಅವರು ಕಿಡಿಕಾರುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, “ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡುತ್ತದೆ, ನಾವು ತೆರಿಗೆ ಕಡಿಮೆ ಮಾಡಬೇಕಾ? ಅವರು ಬೆಲೆ ಹೆಚ್ಚಿಸಿದಾಗ ನೀವು ಪ್ರಶ್ನೆ ಕೇಳುವುದೇ ಇಲ್ಲ. ಆದರೆ ರಾಜ್ಯ ಸರ್ಕಾರ ತೆರಿಗೆ ಕಡಿತ ಮಾಡುತ್ತದೆಯಾ ಅಂತ ಕೇಳ್ತೀರಾ” ಎಂದು ಮಾಧ್ಯಮಗಳನ್ನೇ ಪ್ರಶ್ನಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, “ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಪೆಟ್ರೋಲ್ ದರ 70 ರೂ., ಡೀಸೆಲ್ 48 ರೂ. ಇತ್ತು. ಗ್ಯಾಸ್ ಸಿಲಿಂಡರ್ 414 ರೂ.ಗೆ ಸಿಗುತ್ತಿತ್ತು. ಈಗ ಎಷ್ಟು ಆಗಿದೆ? ಯಾರು ಬೆಲೆ ಏರಿಸಿದ್ದಾರೆ ಎಂಬುದನ್ನು ಜನರು ನೋಡಬೇಕು” ಎಂದರು.
ರಾಜ್ಯ ಸರ್ಕಾರ ಜನರಿಗೆ ಪರಿಹಾರ ನೀಡುತ್ತದೆಯೇ ಎಂಬ ಪ್ರಶ್ನೆಗೆ ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, “ಕೇಂದ್ರ ಸರ್ಕಾರ ಬೆಲೆ ಹೆಚ್ಚಿಸಿದಾಗ ಅವರಿಗೆ ಯಾಕೆ ಪ್ರಶ್ನೆ ಕೇಳಲ್ಲ? ರಾಜ್ಯ ತೆರಿಗೆ ಕಡಿಮೆ ಮಾಡಬೇಕು ಅಂತ ಮಾತ್ರ ಕೇಳ್ತೀರಾ? ನಿಮ್ಮ ಪ್ರಶ್ನೆಗಳಲ್ಲೇ ಯಾರ ಪರ ಇದ್ದೀರೋ ಗೊತ್ತಾಗುತ್ತಿದೆ” ಎಂದು ಮಾಧ್ಯಮಗಳ ವಿರುದ್ಧ ಅಸಮಾಧಾನ ಹೊರಹಾಕಿದರು.



