ಬೆಂಗಳೂರು: ತಮಿಳುನಾಡು ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಟಿವಿಕೆ ಭಾರೀ ಮುನ್ನಡೆ ಸಾಧಿಸಿರುವ ಹಿನ್ನೆಲೆ ಪಕ್ಷದ ಮುಖ್ಯಸ್ಥ ನಟ ವಿಜಯ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಆಡಳಿತ ವಿರೋಧಿ ಅಲೆ ಸ್ಪಷ್ಟವಾಗಿ ಕಾಣಿಸುತ್ತಿದೆ. ಜೊತೆಗೆ ಹೊಸ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿರುವ ಟಿವಿಕೆ ಪಕ್ಷಕ್ಕೆ ವಿಜಯ್ ಅವರ ಜನಪ್ರಿಯತೆ ದೊಡ್ಡ ಮಟ್ಟದಲ್ಲಿ ನೆರವಾಗಿರಬಹುದು ಎಂದು ಅಭಿಪ್ರಾಯಪಟ್ಟರು.
“ವಿಜಯ್ ಅವರಿಗೆ ಅಭಿನಂದನೆಗಳು. ಹೊಸ ಪಕ್ಷವಾಗಿ ಉತ್ತಮ ಪ್ರದರ್ಶನ ತೋರಿರುವುದು ಗಮನಾರ್ಹ ಬೆಳವಣಿಗೆ” ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯದ ಉಪಚುನಾವಣೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ದಾವಣಗೆರೆಯಲ್ಲಿ ಕೆಲವು ಸ್ಥಳೀಯ ಕಾರಣಗಳಿಂದ ಕಾಂಗ್ರೆಸ್ ಮುನ್ನಡೆ ಕಡಿಮೆಯಾಗಿರಬಹುದು. ಆದರೂ ಅಂತಿಮವಾಗಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದರು. ಬಾಗಲಕೋಟೆಯಲ್ಲೂ ಕಾಂಗ್ರೆಸ್ ಗೆಲ್ಲಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಪಶ್ಚಿಮ ಬಂಗಾಳದ ಫಲಿತಾಂಶ ಕುರಿತು ಮಾತನಾಡಿದ ಸಿದ್ದರಾಮಯ್ಯ, ಅಲ್ಲಿ ಕಾಂಗ್ರೆಸ್ ಪ್ರಭಾವ ಸೀಮಿತವಾಗಿದ್ದು, ಬಿಜೆಪಿ ಮುನ್ನಡೆಗೆ ಆಡಳಿತ ವಿರೋಧಿ ಅಲೆ ಕಾರಣವಾಗಿರಬಹುದು ಎಂದು ಹೇಳಿದರು.
ಅಸ್ಸಾಂನಲ್ಲಿ ಸೋಲನ್ನು ಒಪ್ಪಿಕೊಳ್ಳಬೇಕಾಗಿದೆ ಎಂದ ಅವರು, ಕೇರಳದಲ್ಲಿ ಕಾಂಗ್ರೆಸ್ ನಿರೀಕ್ಷೆಗೂ ಮೀರಿದ ಮುನ್ನಡೆ ಸಾಧಿಸಿರುವುದು ಪಕ್ಷಕ್ಕೆ ಉತ್ಸಾಹ ತುಂಬಿದೆ ಎಂದು ಸಂತಸ ವ್ಯಕ್ತಪಡಿಸಿದರು.



