ಉತ್ತರ ಕನ್ನಡ: ಜೋಯಿಡಾ ತಾಲೂಕಿನ ಚಾಪಾಲಿ ಗವಳಿವಾಡದಲ್ಲಿ ಆಘಾತಕಾರಿ ಘಟನೆ ನಡೆದಿದೆ.
13 ವರ್ಷದ 7ನೇ ತರಗತಿ ವಿದ್ಯಾರ್ಥಿನಿ ಗಂಗುಕವಳಿ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.
ವಿದ್ಯಾರ್ಥಿನಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲದಿದ್ದರೂ ಅಕಸ್ಮಾತ್ ಈ ದುರಂತ ಸಂಭವಿಸಿದೆ. ಸಾವಿಗೆ ಮುನ್ನ ದಿನ ಸಂಜೆಯವರೆಗೂ ಆಕೆ ಸಹಜವಾಗಿ ಆಟವಾಡಿ ಸಂತೋಷದಿಂದ ಇದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ.
ಆದರೆ ಮರುದಿನ ಬೆಳಗ್ಗೆ ವಾಂತಿ ಮಾಡಿದ ಕೆಲವೇ ಕ್ಷಣಗಳಲ್ಲಿ ಆಕೆ ಅಚಾನಕ್ ಅಸ್ವಸ್ಥಗೊಂಡು ಅಸುನೀಗಿದ್ದಾಳೆ ಎಂದು ತಿಳಿದುಬಂದಿದೆ. ಈ ಘಟನೆಯಿಂದ ಗ್ರಾಮಸ್ಥರು ಆಘಾತಕ್ಕೆ ಒಳಗಾಗಿದ್ದಾರೆ.
ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕಿಯ ಅಕಾಲಿಕ ಮರಣದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



