ಗದಗ: ತೋಂಟದಾರ್ಯ ಮಠದ ಜಾತ್ರೆಯಲ್ಲಿ ಸಂಭವಿಸಿದ ಭೀಕರ ಅವಘಡದಲ್ಲಿ 20ಕ್ಕೂ ಹೆಚ್ಚು ತೊಟ್ಟಿಲುಗಳು ಏಕಾಏಕಿ ಕಳಚಿ ಬಿದ್ದಿದ್ದು, ಬ್ರೇಕ್ಡ್ಯಾನ್ಸ್ ಆಡುತ್ತಿದ್ದ 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಘಟನೆಯಲ್ಲಿ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗೆ ಗಂಭೀರ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಘಟನೆ ಸಂಬಂಧ ಗಾಯಾಳು ಸಂಬಂಧಿಗಳ ಆಕ್ರಂದನ, ಆಕ್ರೋಶ ಮುಗಿಲು ಮುಟ್ಟಿದೆ.
“ನಮ್ಮವರ ಕಣ್ಣೆದುರೇ ತೊಟ್ಟಿಲು ಕಳಚಿ ಬಿತ್ತು. ಜನರು ಕಿರುಚುತ್ತಾ ನೆಲಕ್ಕೆ ಬಿದ್ದ ದೃಶ್ಯ ಮರೆಯಲಾಗದು. ಮಕ್ಕಳು, ಮಹಿಳೆಯರು ಕಿರುಚುತ್ತಾ ನೆಲಕ್ಕೆ ಬಿದ್ದ ದೃಶ್ಯ ತುಂಬಾ ಭಯಾನಕವಾಗಿತ್ತು. ಕೆಲವರು ರಕ್ತದ ಗಾಯಗಳೊಂದಿಗೆ ನರಳುತ್ತಿದ್ದರು. ಅವರನ್ನು ಎತ್ತಿಕೊಂಡು ಆಸ್ಪತ್ರೆಗೆ ತರಬೇಕಾಯಿತು,” ಎಂದು ಕಣ್ಣೀರು ಹಾಕಿದ್ದಾರೆ. ಅಲ್ಲದೇ ಈ ಘಟನೆಗೆ ತೋಂಟದಾರ್ಯ ಮಠದ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.
ಜಾತ್ರೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಷ್ಟೇ ಅಲ್ಲದೆ ರಾತ್ರಿಯೇ ಮಠದ ಆವರಣದಲ್ಲಿ ಹಿಂದೂ ವೀರಶೈವ ಲಿಂಗಾಯತ ಯುವ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತೋಂಟದಾರ್ಯ ಮಠದ ಧನದಾಹಿ ನೀತಿಗೆ ಆಕ್ರೋಶ ವ್ಯಕ್ತಪಡಿಸಿದರು. ತಿಂಗಳುಗಳ ಕಾಲ ಜಾತ್ರೆ ನಡೆಸುವ ಅಗತ್ಯ ಹಾಗೂ ಸರಕಾರಿ ಜಾಗೆಯ ದುರ್ಬಳಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೂ ಸಂಘಟನೆಯ ಮುಖಂಡ ರಾಜು ಖಾನಪ್ಪನವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಯಾವುದೇ ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳದೆ ಇಂತಹ ಆಟೋಟಗಳಿಗೆ ಪರವಾನಗಿ ಕೊಟ್ಟವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ.



