ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾಗ ಹಲ್ಲೆ ಮಾಡಿದ್ದ ಆರೋಪ
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಕರ್ತವ್ಯನಿರತ ಅರಣ್ಯಾಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪಕ್ಕಾಗಿ ರಮೇಶ ಹನುಮಂತಪ್ಪ ವಡ್ಡರ ಹಾಗೂ ಇತರರಿಗೆ ಜಿಲ್ಲಾ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪ್ರಕರಣದ ವಿವರ
ತಾಲೂಕಿನ ಆದ್ರಳ್ಳಿ ಗ್ರಾಮದ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ದಿ: 27-11-2015 ರಂದು ಮಧ್ಯರಾತ್ರಿ ರಮೇಶ ಹನುಮಂತಪ್ಪ ವಡ್ಡರ ಹಾಗೂ ಇತರರು ಅಕ್ರಮಕೂಟ ರಚಿಸಿಕೊಂಡು ಸ್ವರಾಜ್ ಕಂಪನಿಯ ಟ್ರಾಕ್ಟರ್ ಹಾಗೂ ಕಂಪ್ರೆಶರ್ ಮಶಿನ್‌ನಿಂದ ಕಲ್ಲುಬಂಡೆಗೆ ರಂಧ್ರ ಹಾಕಿ ಕಲ್ಲು ಒಡೆಯುತ್ತಿದ್ದಾಗ ರಾತ್ರಿ ಗಸ್ತು ಕರ್ತವ್ಯದ ಮೇಲಿದ್ದ ಅರಣ್ಯ ಸಿಬ್ಬಂದಿ ಹಾಗೂ ಅವರ ಜೊತೆಗಿದ್ದ ಜನರು ಅದನ್ನು ತಡೆಯಲು ಹೋದಾಗ, ಅವರಿಗೆ ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದರು.
ಅಲ್ಲದೆ ಸರ್ಕಾರಿ ಜೀಪ್‌ಗೆ ಗ್ಲಾಸ್ ಒಡೆದು, ಸರ್ಕಾರದ ಆಸ್ತಿಯನ್ನು ನಾಶಪಡಿಸಿದ ಆರೋಪವೂ ಅವರ ಮೇಲಿತ್ತು. ಆರೋಪಿತರ ವಿರುದ್ಧ ಅಂದಿನ ಪಿ.ಎಸ್.ಐ. ರವಿಚಂದ್ರ ಬಡಫಕ್ಕೀರಪ್ಪನವರ, ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಸಾಕ್ಷಿ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರ ಎಸ್. ಶೆಟ್ಟಿ ಅವರು ಪ್ರಕರಣದಲ್ಲಿ ಆರೋಪ ರುಜುವಾತು ಆಗಿದ್ದರಿಂದ ಆರೋಪಿ ರಮೇಶ ಹನುಮಂತಪ್ಪ ವಡ್ಡರ ಹಾಗೂ ಇತರರಿಗೆ ಪಿ.ಓ. ಕಾಯ್ದೆ ಅಡಿ ಕಠಿಣ ಷರತ್ತುಗಳನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ಸಾಕ್ಷಿ ವಿಚಾರಣೆ ಮಾಡಿ, ವಾದವನ್ನು ಮಂಡಿಸಿದ್ದರು.