ವಿಜಯಸಾಕ್ಷಿ ಸುದ್ದಿ, ಗದಗ
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಬೇಕೆನ್ನುವ ಸಮಾಜದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮಿಗಳ ಹೋರಾಟ ಸ್ವಾಗತಾರ್ಹ. ಆದರೆ ಪೂಜ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಟಾರ್ಗೆಟ್ ಮಾಡುವ ನಡೆಯನ್ನು ಖಂಡಿಸುತ್ತೇನೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಬೇಡಿಕೆ ಕುರಿತು ಪ್ರಾಮಾಣಿಕ ಕಳಕಳಿ ಇದೆ. ಶ್ರೀಗಳು ಇದಕ್ಕಾಗಿ ಹೋರಾಟ ಮಾಡಲಿ, ಆದ್ರೆ ಸಿಎಂ ಅವರನ್ನು ಯಾಕೆ ಟಾರ್ಗೆಟ್ ಮಾಡ್ತಾರೆ ಎನ್ನುವುದು ನನ್ನ ಮಿಲಿಯನ್ ಡಾಲರ್ ಪ್ರಶ್ನೆ ಎಂದರು.
ಸಿಎಂ ಮನೆ ಮುಂದೆ ಯಾಕೇ ಧರಣಿ? ಅವರ ಕ್ಷೇತ್ರದಲ್ಲಿ ಸತ್ಯಾಗ್ರಹ ಯಾಕೆ? ಈ ಹಿಂದೆ ಅವರ ಹೋರಾಟಕ್ಕೆ ನಾವು ಬೆಂಬಲ ನೀಡಿದ್ದೇವೆ. ನಾವು ಕೂಡಾ ಸಾಕಷ್ಟು ಖರ್ಚು ಮಾಡಿ, ಪಾದಯಾತ್ರೆಗೆ ಜನರನ್ನು ಕಳಿಸಿದ್ದೇವೆ.
ಈಗ ಒಬ್ಬಿಬ್ಬರ ಮಾತು ಕೇಳಿಕೊಂಡು ಸಿಎಂ ಮನೆ ಮುಂದೆ ಹೋರಾಟ ಅಂತಾರೆ. ಶ್ರೀಗಳಿಗೆ ಭಕ್ತಿ, ನಮ್ರತೆಯಿಂದ ತಿಳಿಸಿ ಹೇಳಿದ್ದೇನೆ. ಸಮಾಜ ಎಂದರೆ ಒಬ್ಬಿಬ್ಬರ ಮಾತು ಕೇಳಿಕೊಂಡು, ನಿರ್ಧಾರ ಮಾಡೋದಲ್ಲ, ಸಮಾಜದ ನಾಲ್ಕಾರು ಹಿರಿಯರ ಜೊತೆ ಸಮಾಲೋಚಿಸಿ ಮುಂದಿನ ನಡೆ ತೀರ್ಮಾನಿಸಬೇಕು. ಬೊಮ್ಮಾಯಿಯವರ ಮನೆ ಮುಂದೆ ಶ್ರೀಗಳ ಹೋರಾಟವನ್ನು ವಿರೋಧಿಸುತ್ತೇನೆ ಎಂದರು.