ಆತ್ಮಹತ್ಯೆಗೆ ಪ್ರಚೋದನೆ; ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

0
Spread the love

ಜಮೀನು ವಿಷಯವಾಗಿ ಕಿರುಕುಳ ಆರೋಪ……

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಜಮೀನಿನ ವಿಷಯವಾಗಿ ನಡೆಯುತ್ತಿದ್ದ ಸಣ್ಣ-ಪುಟ್ಟ ಕಿರಿಕಿರಿಯನ್ನೇ ಮನಸ್ಸಿಗೆ ಹಚ್ಚಿಕೊಂಡು, ಊರಿಗೆ ಹೋಗುತ್ತೇನೆಂದು ಹೇಳಿ ತನ್ನ ಪತಿ ಹೊಲದಲ್ಲಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದು, ಪತಿಯ ಮರಣಕ್ಕೆ ಮೂವರು ವ್ಯಕ್ತಿಗಳು ನೀಡಿದ ಕಿರುಕುಳ, ಪ್ರಚೋದನೆಯೇ ಕಾರಣವಾಗಿದೆ ಎಂದು ಮೃತರ ಪತ್ನಿ ಶಿರಹಟ್ಟಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಘಟನೆಯ ವಿವರ: ಠಾಣೆಯಲ್ಲಿ ದೂರು ನೀಡಿರುವ ಮಹಿಳೆ ಮಾಚೇನಳ್ಳಿ, ಶಿರಹಟ್ಟಿಯ ಚಂದನಾ ಶರಣಪ್ಪ ಮರಿಗೌಡ್ರ ಹಾಲಿ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕು ಅಣಜಿಗೇರಿಯಲ್ಲಿ ವಾಸವಿದ್ದರು. ಇವರ ಅಜ್ಜನ ಹೆಸರಿನಲ್ಲಿ ಮಾಚೇನಳ್ಳಿ ಹದ್ದಿಯಲ್ಲಿ 3 ಎಕರೆ 1 ಗುಂಟೆ ಹಾಗೂ ನವೇ ಭಾವನೂರು ಹದ್ದಿಯಲ್ಲಿ ಮೃತ ವ್ಯಕ್ತಿ ಮೃತ ಶರಣಪ್ಪ ಶೇಖಪ್ಪ ಮರಿಗೌಡ್ರ ಇವರ ಹೆಸರಿನಲ್ಲಿ 3 ಎಕರೆ 16 ಗುಂಟೆ ಜಮೀನು ಇತ್ತು. ಈ ಹೊಲದ ವಿಷಯವಾಗಿ ಶರಣಪ್ಪರ ಅತ್ತೆಯ ಮಕ್ಕಳು, ತಮಗೂ ಪಾಲು ಬರುತ್ತದೆ ಎಂದು ಲಕ್ಷ್ಮೇಶ್ವರ ಜೆಎಂಎಫ್‌ಸಿಯಲ್ಲಿ ದಾವೆ ಹೂಡಿದ್ದರು.

ಈ ಸಂಬಂಧ ಶರಣಪ್ಪ ಆಗಾಗ ತಮ್ಮ ಹೊಲಕ್ಕೆ ಹೋದಾಗ ಅವರ ಅತ್ತೆಯ ಮಕ್ಕಳಾದ ಶಿರಹಟ್ಟಿ ತಾಲೂಕು ರಣತೂರಿನ ನಾಗಪ್ಪ, ಚನ್ನಪ್ಪ ಹಾಗೂ ಈಶಪ್ಪ ಸಣ್ಣ-ಪುಟ್ಟ ತಕರಾರು ಮಾಡುತ್ತಿದ್ದಾರೆ ಎಂದು ಹೇಳಿ ನೊಂದುಕೊಂಡಿದ್ದರು.

ಫಿರ್ಯಾದಿಯ ಪತಿ ಶರಣಪ್ಪ ವಾರದ ಹಿಂದೆ ದಾವಣಗೆರೆಯಿಂದ ತಮ್ಮೂರು ಮಾಚೇನಳ್ಳಿಗೆ ಹೊಲದ ಕೆಲಸಕ್ಕೆಂದು ಬಂದಿದ್ದರು. ಮಾರ್ಚ್.7ರ ಬೆಳಿಗ್ಗೆ 5 ಗಂಟೆಯ ಸುಮಾರಿಗೆ ಊರಿಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದು, ಮಾರ್ಚ್‌ 9ರ ಬೆಳಿಗ್ಗೆ 7.30ರ ನಡುವಿನ ಅವಧಿಯಲ್ಲಿ ತಮ್ಮ ಹೊಲದಲ್ಲಿ ಜಾಲಿ ಗಿಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆ ಸಮಯದಲ್ಲಿ ಮೃತನ ಕಿಸೆಯಲ್ಲಿ ʻನನ್ನ ಸಾವಿಗೆ ಅತ್ತೆಯ ಮಕ್ಕಳಾದ ರಣತೂರ ಗ್ರಾಮದ ನಾಗಪ್ಪ, ಚನ್ನಪ್ಪ, ಈಶಪ್ಪ ಇವರೇ ಕಾರಣʼ ಎಂದು ತನ್ನ ಕೈಯಾರೆ ಬರೆದ ಚೀಟಿ ಸಿಕ್ಕಿದ್ದು, ತನ್ನ ಪತಿಯ ಮರಣಕ್ಕೆ ಈ ಮೂವರು ಆರೋಪಿಗಳೇ ಕಾರಣರಾಗಿದ್ದಾರೆ ಎಂದು ಚಂದನಾ ಮರಿಗೌಡ್ರ ದೂರು ಸಲ್ಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಶಿರಹಟ್ಟಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here