ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆ ಲಕ್ಷ್ಮೇಶ್ವರ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಿದರು.
ಜಿಲ್ಲಾ ಅಧ್ಯಕ್ಷ ಸದಾನಂದ ನಂದೆಣ್ಣವರ್ ಮತ್ತು ತಾಲೂಕು ಅಧ್ಯಕ್ಷ ನಾಗೇಶ ಅಮರಾಪೂರ ಅವರು ಮಾತನಾಡಿ, ಹತ್ತು ವರ್ಷದ ಬಾಲಕಿಯನ್ನ ಅತ್ಯಾಚಾರ ಮಾಡಿ ಕೊಲೆಗೈದವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು.
ಅಕ್ಟೋಬರ್ 12 ರಂದು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ 10 ವರ್ಷದ ಬಾಲಕಿ ಟ್ಯೂಶನ್‌ಗೆ ಹೋದವಳು ಮನೆಗೆ ವಾಪಸ್ ಆಗಿರಲಿಲ್ಲ. ಈ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ನಿಜಕ್ಕೂ ಹೇಯ ಕೃತ್ಯ. ಇದನ್ನು ನಮ್ಮ ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ.
ಇಂತಹ ಘಟನೆಗಳು ಮುಂದೆ ನಡೆಯದಂತೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅತ್ಯಾಚಾರಗೈದ ವ್ಯಕ್ತಿಗೆ ಕಾನೂನು ರೀತಿ ಕ್ರಮ ಕೈಗೊಂಡು ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.
ಸಂತೋಷ ರಗಟಿ, ನಾಗರಾಜ ಕುಸುಗಲ್, ನಾಗಪ್ಪ ಹರ್ಲಾಪೂರ, ಸುನೀಲ ಬಾರಕೇರ, ಹಾಲಪ್ಪ ಮೇಟಿ, ಅಶೋಕ ಕೋಳಿವಾಡ, ಶಿವರಾಜ ಭಂಗಿ, ರಮೇಶ ಉಮಚಗಿ, ಹನುಮಂತ ವಗ್ಗಣವರ, ಕಿರಣ ಪಾಟೀಲ್, ಶರತ ಗಾಣಗೇರ, ಇಮಾಮ ಸೊರಟೂರ, ಶರೀಫ ವಾಲಿಕಾರ, ಅಲ್ತಾಫ ವಾಲಿಕಾರ, ಲಕ್ಷ್ಮಣ ಲಮಾಣಿ, ಕಾರ್ತಿಕ ಕುಲಗೇರಿ ಮುಂತಾದವರು ಹಾಜರಿದ್ದರು.