ರಾಜ್ಯದ ವಿವಿಧೆಡೆ ಭ್ರಷ್ಟ ಅಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ದಾಳಿ……
ವಿಜಯಸಾಕ್ಷಿ ಸುದ್ದಿ, ಹಾವೇರಿ/ ಬೆಂಗಳೂರು
ಹಾವೇರಿ ಹಾಗೂ ರಾಣೆಬೆನ್ನೂರು ನಿರ್ಮಿತಿ ಕೇಂದ್ರದ ಇಂಜಿನಿಯರ್ ವಾಗೀಶ ಶೆಟ್ಟರ್ ಮನೆಯ ಮೇಲೆ ಬುಧವಾರ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಣೆಬೆನ್ನೂರಿನ ಸಿದ್ದಾರೂಢ ಮಠದ ಹಿಂಬಾಗದಲ್ಲಿರುವ ಅವರ ಮನೆಯ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, 10 ಇಂಚು ಅಳತೆಯ ಜಿಂಕೆ ಕೊಂಬು ಸಹಿತ ಒಟ್ಟು 4.75 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.
ಇವುಗಳಲ್ಲಿ ಅರ್ಧ ಕೆ.ಜಿ ಬಂಗಾರ, 2 ಕೆ.ಜಿ ಬೆಳ್ಳಿಯ ವಸ್ತುಗಳು, 18.30 ಲಕ್ಷ ರೂ. ನಗದು ಹಣ ಪತ್ತೆಯಾಗಿದ್ದು, ಹಣ ಎಣಿಕೆ ಮಾಡುವ ಯಂತ್ರ, ೩ ಕಾರು, 2 ಟ್ರಾಕ್ಟರ್, 2 ಬೈಕ್ ಸೇರಿದಂತೆ 8 ಮನೆ, ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು 16 ಸೈಟ್, 65 ಎಕರೆ ಭೂಮಿಯ ದಾಖಲೆ ಪತ್ರಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.
ಅಕ್ರಮವಾಗಿ ಸಂಗ್ರಹಿಸಿರುವ ಜಿಂಕೆ ಕೊಂಬು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದರೊಂದಿಗೆ ಮೈಸೂರು ಮತ್ತು ಶಿವಮೊಗ್ಗಗಳಲ್ಲೂ ಬುಧವಾರ ಲೋಕಾಯುಕ್ತ ಅಧಿಕಾರಿಗಳು ಬೇಟೆಗಿಳಿದಿದ್ದಾರೆ. ಮೈಸೂರಿನಲ್ಲಿ ನಾಲ್ಕು ಅಧಿಕಾರಿಗಳ ಮತ್ತು ಶಿವಮೊಗ್ಗದಲ್ಲಿ ಇಬ್ಬರು ಅಧಿಕಾರಿಗಳ ಮನೆಗೆ ದಾಳಿ ನಡೆಸಲಾಗಿದ್ದು, ಕೇಜಿಗಟ್ಟಲೆ ಚಿನ್ನ, ಫಾರಿನ್ ಮದ್ಯ ಇತ್ಯಾದಿ ದುಬಾರಿ ವಸ್ತುಗಳು ಸಿಕ್ಕಿದೆ ಎಂದು ಹೇಳಲಾಗಿದೆ.
ಮೈಸೂರು ನಗರದ ವಿವಿಧ ಕಡೆಗಳಲ್ಲಿ ನಾಲ್ವರು ಹಿರಿಯ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆದಿದ್ದು, ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಮೈಸೂರು ಪಾಲಿಕೆ ಅಧಿಕಾರಿ ಮಹೇಶ್ ಕುಮಾರ್ ನಿವಾಸದ ಮೇಲೆ ದಾಳಿ ನಡೆಸಿ ನೀರಿನ ಟ್ಯಾಂಕ್ ಒಳಗೂ ಲೋಕಾಯುಕ್ತ ತಂಡ ಪರಿಶೀಲನೆ ನಡೆಸಿದೆ. ನಗರಾಭಿವೃದ್ಧಿ ಪ್ರಾಧಿಕಾರದ ಮುಖ್ಯ ಲೆಕ್ಕಾಧಿಕಾರಿ ಮುತ್ತು, ನಂಜನಗೂಡು ತಾಲೂಕು ಸಬ್ ರಿಜಿಸ್ಟಾರ್ ಶಿವಶಂಕರಮೂರ್ತಿ, ಮೂಡಾ ಅಸಿಸ್ಟೆಂಟ್ ಇಂಜಿನಿಯರ್ ನಾಗೇಶ್ ಮನೆ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿದರು.
ಮೈಸೂರು ಮಹಾನಗರ ಪಾಲಿಕೆ ಅಧಿಕಾರಿ ಮಹೇಶ್ ಕುಮಾರ್ ಮನೆಯಲ್ಲಿ ಸುದೀರ್ಘ ತಪಾಸಣೆ ನಡೆಸಲಾಗಿದೆ.
ಶಿವಮೊಗ್ಗದಲ್ಲಿ ಬುಧವಾರ ಮುಂಜಾನೆ ಲೋಕಾಯುಕ್ತ ದಾಳಿ ನಡೆಸಿ, ತುಂಗಾ ಮೇಲ್ದಂಡೆ ಯೋಜನೆ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೆ ಅವರ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ, ಬೆಳ್ಳಿ ಪತ್ತೆಹಚ್ಚಿದ್ದಾರೆ.