ಹೂವುಗಳನ್ನು ಎರಚುತ್ತಿದ್ದ ಸಂದರ್ಭದಲ್ಲಿ ತೂರಿ ಬಂದ ಕಲ್ಲು……..
ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
ಹನುಮಜಯಂತಿ ಹಾಗೂ ರಾಮನವಮಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಚಂದ್ರು ಲಮಾಣಿ ಅವರ ಮೇಲೆ ಅಪರಿಚಿತ ಕಿಡಿಗೇಡಿಯೊಬ್ಬ ಶಾಸಕರ ಮೇಲೆ ಕಲ್ಲು ಎಸೆದಿರುವ ಘಟನೆಯ ಬಗ್ಗೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೇ.27ರ ರಾತ್ರಿ 8.15ರ ಸುಮಾರಿಗೆ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಹನುಮಜಯಂತಿ ಹಾಗೂ ರಾಮನವಮಿಯ ನಿಮಿತ್ತ ಮೆರವಣಿಗೆ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಆಗಮಿಸಿದ್ದು, ಗ್ರಾಮಸ್ಥರು ಶಾಸಕರಿಗೆ ಮಾಲಾರ್ಪಣೆ ಮಾಡಿ ಗೌರವಿಸಿ, ಗ್ರಾಮದ ಚೌತಮನಿಕಟ್ಟಿ ಹತ್ತಿರ ಸೇರಿದ ಜನರು ಮೆರವಣಿಗೆಯಲ್ಲಿ ಹೂವುಗಳನ್ನು ಎರಚುತ್ತಿದ್ದರು.
ಈ ಸಮಯದಲ್ಲಿ ಯಾರೋ ಒಬ್ಬ ಕಿಡಿಗೇಡಿ ಸಣ್ಣ ಕಲ್ಲನ್ನು ಶಾಸಕರೆಡೆ ಎಸೆದಿದ್ದು, ಅದು ಶಾಸಕರಿಗೆ ಬಡಿದಿದೆ. ಕಲ್ಲು ಎಸೆದವರು ಯಾರೆಂದು ಸೇರಿದ ಜನರಲ್ಲಿ ವಿಚಾರಿಸಿ ಹುಡುಕಿದಾಗ ಯಾರೆಂದು ತಿಳಿದಿಲ್ಲ.
ಹೀಗೆ ಕಲ್ಲು ಎಸೆದ ಅಪರಿಚಿತ ಕಿಡಿಗೇಡಿಯ ವಿರುದ್ಧ ಸೂರಣಗಿ ಗ್ರಾಮದ ಅಶೋಕ ಎಂಬುವರು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರಿನನ್ವಯ ಅಪರಾಧ 0068/2023, ಐಪಿಸಿ ಸೆಕ್ಷನ್ 1860ರ ಕಲಂ 324ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.