ವಿಜಯಸಾಕ್ಷಿ ಸುದ್ದಿ, ಗದಗ
ಜಿಲ್ಲೆಯ ಮುಂಡರಗಿ ತಾಲೂಕಿನ ಕೆಲ ಹಳ್ಳಿಗಳಲ್ಲಿ ರೈತರ ಜಮೀನುಗಳಲ್ಲಿನ ನಡೆದಿದ್ದ ಹನಿ ನೀರಾವರಿ ಪೈಪ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಮುಂಡರಗಿ ಪೊಲೀಸರು ಆರು ಜನರನ್ನು ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಪೈಪ್ ಜಪ್ತಿ ಮಾಡಿದ್ದಾರೆ.
ಆಗಸ್ಟ್ ಮೂರರಂದು ಮುಂಡರಗಿ ತಾಲೂಕಿನ ಜಂತ್ಲಿ-ಶಿರೂರು ಗ್ರಾಮದಲ್ಲಿ ಹನಿ ನೀರಾವರಿ ಪೈಪ್ ಗಳನ್ನು ಕಳ್ಳತನ ಮಾಡಿ ಟ್ರ್ಯಾಕ್ಟರ್ ಮೂಲಕ ಸಾಗಾಟ ಮಾಡುತ್ತಿದ್ದಾಗ ಗ್ರಾಮಸ್ಥರ ಕಣ್ಣಿಗೆ ಬಿದ್ದಿದ್ದ ಖದೀಮರು, ಗ್ರಾಮಸ್ಥರು ಬೆನ್ನಟ್ಟಿದಾಗ ಟ್ರ್ಯಾಕ್ಟರ್ ಬಿಟ್ಟು ಓಡಿ ಹೋಗಿ ಪರಾರಿಯಾಗಿದ್ದರು.
ಇದನ್ನೂ ಓದಿ ಗ್ರಾಮಸ್ಥರ ಕಣ್ಣಿಗೆ ಬಿದ್ದ ನೀರಿನ ಪೈಪ್ ಕಳ್ಳರು! ಬೆನ್ನಟ್ಟಿದಾಗ ಟ್ರ್ಯಾಕ್ಟರ್ ಬಿಟ್ಟು ಪರಾರಿ
ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಕಳ್ಳರನ್ನು ಹಿಡಿದು ರೈತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದರು.
ಪ್ರಕರಣ ದಾಖಲು ಮಾಡಿಕೊಂಡ ಮುಂಡರಗಿ ಪೊಲೀಸರು ಹಿರೇವಡ್ಡಟ್ಟಿಯ ನಾಲ್ಕು ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಕೊಟೇಶ್ ನಿಂಗಪ್ಪ ಹಂಚಿನಾಳ, ಹನಮಂತ ಕನಕಪ್ಪ ನಿಟ್ಟಾಲಿ, ವಿಜಯಕುಮಾರ್ ಶರಣಯ್ಯ ಹಾಲಗಿಮಠ ಹಾಗೂ ದೇವೇಂದ್ರ ಅಲಿಯಾಸ್ ದೇವರಾಜ ಬಸವಣ್ಣೆಪ್ಪ ಲಕ್ಕುಂಡಿ ಎಂದು ಪೊಲೀಸ ಮೂಲಗಳು ತಿಳಿಸಿವೆ.
ಇನ್ನೊಂದು ಪ್ರಕರಣ ಆಗಸ್ಟ್ 7 ರ ಅಂದರೆ ಭಾನುವಾರ ಬೆಳಗಿನ ಜಾವ ಮುಂಡರಗಿ ಪಟ್ಟಣದಲ್ಲಿ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಹನಿ ನೀರಾವರಿ ಪೈಪ್ ಸಾಗಾಟ ಮಾಡುತ್ತಿದ್ದಾಗ, ಪೊಲೀಸರ ಕೈಗೆ ಇಬ್ಬರು ಸಿಕ್ಕಿ ಬಿದ್ದಿದ್ದಾರೆ.
ಬಂಧಿತರನ್ನು ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಶರಣಪ್ಪ ರಮೇಶ್ ಉಪ್ಪಾರ ಹಾಗೂ ಹಾಲೇಶ್ ನಿಂಗಪ್ಪ ಸಿಂದೋಗಿ ಎಂದು ಗುರುತಿಸಲಾಗಿದೆ. ಇನ್ಸ್‌ಪೆಕ್ಟರ್ ಸುನಿಲ್ ಸವದಿ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ಮಾಡಲಾಗಿದೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


