ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಸ್ವಚ್ಚತಾ ಅಭಿಯಾನ, ಅವಳಿ ನಗರದ ಸ್ವಚ್ಚತೆಗೆ ಕೈಜೋಡಿಸಿ; ಉಷಾ ದಾಸರ
ವಿಜಯಸಾಕ್ಷಿ ಸುದ್ದಿ, ಗದಗ
ಗದಗ-ಬೆಟಗೇರಿ ಅವಳಿ ನಗರದ ಸೌಂದರ್ಯೀಕರಣ ಕೇವಲ ಪೌರ ಕಾರ್ಮಿಕರಿಂದಷ್ಟೇ ಸಾಧ್ಯವಿಲ್ಲ. ಅವರ ಜೊತೆಗೆ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಕೈಜೋಡಿಸಿದಾಗಷ್ಟೇ ಅವಳಿ ನಗರ ಸ್ವಚ್ಚತೆಯಲ್ಲಿ ಮಾದರಿ ನಗರವಾಗಿ ಹೊರಹೊಮ್ಮಲಿದೆ ಎಂದು ನಗರಸಭೆ ಅಧ್ಯಕ್ಷೆ ಉಷ ದಾಸರ ಹೇಳಿದರು.
ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸ್ವಚ್ಚತೆ ಕಾಪಾಡುವುದರಿಂದ ಕೊಳಚೆಯಿಂದ ಹರಡಬಹುದಾದ ಅರ್ಧದಷ್ಟು ಕಾಯಿಲೆಗಳನ್ನು ನಿಯಂತ್ರಿಸಬಹುದು. ಇಂತಹ ಮಹಾತ್ಕಾರ್ಯಕ್ಕೆ ಅವಳಿ ನಗರದ ಸ್ವಚ್ಚತೆಗೆ ಪೌರ ಕಾರ್ಮಿಕರು ಪ್ರತಿನಿತ್ಯ ಶ್ರಮಿಸುತ್ತಿದ್ದಾರೆ. ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆಯದೆ ಸ್ವಚ್ಚತೆಗೆ ಸಹಕರಿಸಬೇಕು. ಕಸದ ತೊಟ್ಟಿಗಳಲ್ಲಿ ಕಸ ಹಾಕಬೇಕು. ರಾತ್ರಿ ಹೊತ್ತು ತ್ಯಾಜ್ಯವನ್ನು ರಸ್ತೆ ಬದಿ ಎಸೆದು ಹೋಗುತ್ತಿರುವುದರಿಂದ ಅವಳಿ ನಗರ ಅಂದಗೆಡುತ್ತಿದೆ. ಹೀಗಾಗಿ ಎಲ್ಲೆಂದರಲ್ಲಿ ಕಸ ಎಸೆಯುವ ರೂಢಿಯನ್ನ ಕೈಬಿಟ್ಟು
ಸ್ವಚ್ಚತೆಯ ವಿಚಾರದಲ್ಲಿ ಅವಳಿ ನಗರವನ್ನು ಸುಂದರ ನಗರವನ್ನಾಗಿಸಬೇಕು ಎಂದರು.

ಮಹಾತ್ಮಾ ಗಾಂಧಿಜಿ ಅವರು ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದರಲ್ಲದೇ, ಸ್ವಚ್ಚತೆಯಲ್ಲಷ್ಟೇ ದೇವರು ಕಾಣುತ್ತಾನೆ ಎಂದು ಹೇಳುತ್ತಿದ್ದರು. ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕ ಆಸ್ತಿಗಳು, ರಸ್ತೆಗಳನ್ನು ಸ್ವಚ್ಚವಾಗಿಡುವ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಜಿ ಅವರು 2014ರಲ್ಲಿ ಸ್ವಚ್ಚ ಭಾರತ ಅಭಿಯಾನ ಪ್ರಾರಂಭಿಸಿದ್ದಾರೆ. ಈ ಅಭಿಯಾನದಿಂದಾಗಿ ದೇಶದ ಬಹುತೇಕ ನಗರಗಳಿಂದು ಸುಂದರವಾಗಿ ಕಾಣುತ್ತಿದ್ದು, ಅಂತಹ ನಗರಗಳ ಪಟ್ಟಿಯಲ್ಲಿ ಗದಗ-ಬೆಟಗೇರಿಯೂ ಸೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಉಷಾ ದಾಸರ ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಅನಿಲ್ ಅಬ್ಬಿಗೇರಿ, ಅನಿತಾ ಗಡ್ಡಿ, ಮುಖಂಡರಾದ ವಿಜಯಕುಮಾರ್ ಗಡ್ಡಿ, ಮಹೇಶ ದಾಸರ, ಶಶಿಧರ ದಿಂಡೂರ, ಅಮರನಾಥ್ ಗಡಗಿ, ವಿಜಯಲಕ್ಷ್ಮಿ ಮಾನ್ವಿ, ಪ್ರಶಾಂತ್ ದಾಸರ ಸೇರಿದಂತೆ ಸಂಘ ಸಂಸ್ಥೆಗಳ ಮುಖಂಡರು, ಬಿಜೆಪಿ ಕಾರ್ಯಕರ್ತರು ಹಾಗೂ ಪೌರ ಕಾರ್ಮಿಕರು ಇದ್ದರು.