30.8 C
Gadag
Monday, May 29, 2023

ಸಿದ್ಧರಾಮೋತ್ಸವ ಸ್ಟಿರಾಯ್ಡ್ ಇದ್ದಂತೆ, ಬಹಳ ಕಾಲ ಪರಿಣಾಮ ಬೀರುವದಿಲ್ಲ: ಸಿ.ಸಿ. ಪಾಟೀಲ ವ್ಯಂಗ್ಯ

Spread the love

ಸಿದ್ಧರಾಮೋತ್ಸವದಿಂದ ಬಿಜೆಪಿಯ ಮೇಲೆ ಯಾವ ಪರಿಣಾಮವೂ ಇಲ್ಲ

ವಿಜಯಸಾಕ್ಷಿ ಸುದ್ದಿ, ಗದಗ

ಕಾಂಗ್ರೆಸ್ ನವರು ಇಂಥದೊಂದು ಸಮಾವೇಶ ಮಾಡಿ ಸಂತಸಪಟ್ಟಿರಬಹುದು. ಇಂತಹ ಸಮಾವೇಶಗಳನ್ನು ಬಿಜೆಪಿಯಲ್ಲಿ ದಿನಕ್ಕೊಂದು ಬೇಕಿದ್ದರೂ ಮಾಡ್ತೇವೆ. ಅವರ ಅಸ್ತಿತ್ವ ಉಳಿಸಿಕೊಳ್ಳಲು ವಿರೋಧ ಪಕ್ಷದವರು ಇಂಥವುಗಳನ್ನ ಮಾಡ್ತಾರೆ. ನಾನಾ-ನೀನಾ ಎಂದು ಬಲ ಪ್ರದರ್ಶಿಸುವ ಉದ್ದೇಶಕ್ಕೆ ಸಮಾವೇಶ ಮಾಡುತ್ತಾರೆ. ಆದರೆ, ಇವರು ಸಂಘಟನೆ ಮಾಡಿ ಸಮಾವೇಶ ಆಯೋಜಿಸಿದ ಮಾತ್ರಕ್ಕೆ ಕಾಂಗ್ರೆಸ್ ನಲ್ಲಿ ಶಾಸಕರಿದ್ದವರು ಸಿ.ಎಂ ಆಗಿಬಿಡೋದಿಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಲೇವಡಿ ಮಾಡಿದರು.

ಅವರು, ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಸಿದ್ಧರಾಮೋತ್ಸವದಲ್ಲಿ ಸಿದ್ದು-ಡಿಕೆಶಿ ಆಲಿಂಗನ ಮಾಡಿದ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಿದ್ಧರಾಮಯ್ಯ ಹಾಗೂ ಡಿಕೆಶಿಯವರಿಗೆ ಆಲಿಂಗನ ಮಾಡಿಸಿದ್ದು ರಾಹುಲ್ ಗಾಂಧಿ. ಕೇವಲ ಕೈಸನ್ನೆ ಮಾಡಿಯೇ ಹೀಗೆ ಕೂಡಿಸಿಬಿಟ್ರಲ್ಲ! ಎಂದು ಚಟಾಕಿ ಹಾರಿಸಿದರು.

ಸಿದ್ಧರಾಮೋತ್ಸವ ಸ್ಟಿರಾಯ್ಡ್ ಇದ್ದಂತೆ. ಸ್ಟಿರಾಯ್ಡ್ನ ಶಕ್ತಿ ಬಹಳ ಹೊತ್ತು ಇರುವದಿಲ್ಲ. ಇನ್ನೂ 8 ತಿಂಗಳವರೆಗೆ ಈ ಸ್ಟಿರಾಯ್ಡ್ ಶಕ್ತಿ ನಿಲ್ಲುವದಿಲ್ಲ. ಹಾಗೆಯೇ ಸಿದ್ಧರಾಮೋತ್ಸವವೂ ಕೂಡ ಬಹಳ ಕಾಲ ಪರಿಣಾಮ ಬೀರುವದಿಲ್ಲ. ಇವರ ಸಿದ್ಧರಾಮೋತ್ಸವ ಕಾರ್ಯಕ್ರಮ ಬಿಜೆಪಿಯ ಮೇಲೆ ಯಾವ ಪರಿಣಾಮವನ್ನೂ ಬೀರುವದಿಲ್ಲ. ಇಂಥಹ ಆಯೋಜನೆಗಳಿಂದ ಬಿಜೆಪಿ ಹೆದರುವದೂ ಇಲ್ಲ ಬಿಡಿ. ಹುಟ್ಟುಹಬ್ಬದ ಸಂಭ್ರಮವನ್ನು ನೋಡಿ ಜನ ಓಟು ಹಾಕುವುದಿಲ್ಲ ಎಂದು ಹೇಳಿದರು.

ರಾಷ್ಟ್ರಧ್ವಜದ ಬಗ್ಗೆ ಹಗುರವಾಗಿ ಮಾತನಾಡುವುದು ಯಾರಿಗೂ ಶೋಭೆ ತರುವ ವಿಚಾರವಲ್ಲ. ರಾಷ್ಟ್ರಧ್ವಜ ಬಿಜೆಪಿಯ ಸ್ವತ್ತಲ್ಲ. ಆರ್.ಎಸ್.ಎಸ್, ಪ್ರಧಾನಿ ಮೋದಿಯವರನ್ನು ತೆಗಳಿ ಬೈಯದೇ ಇದ್ದರೆ, ಇವರಿಗೆ ತಿಂದ ಊಟ ಜೀರ್ಣವಾಗುವದಿಲ್ಲವೇನೋ. ನಮ್ಮ ಗುರಿ 150+ ಸೀಟುಗಳೆಂದು ನಾವೇನೂ ಡಂಗೂರ ಬಾರಿಸುವ ಅವಶ್ಯಕತೆ ಇಲ್ಲ ಎಂದರು.

ರಾಜ್ಯಾದ್ಯಂತ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಂಭವಿಸುತ್ತಿರುವ ಹಾನಿಯ ಬಗ್ಗೆ ಪ್ರತಿಕ್ರಿಯಿಸಿದ ಸಿ.ಸಿ. ಪಾಟೀಲ, ಕಳೆದ ಎರಡು-ಮೂರು ತಿಂಗಳುಗಳಿಂದ ಅತ್ಯಂತ ಭೀಕರವಾದ ಮಳೆಯನ್ನು ರಾಜ್ಯ ಎದುರಿಸುತ್ತಿದೆ. ಮಡಿಕೇರಿ, ಮೈಸೂರು, ಉಡುಪಿ, ಮಂಗಳೂರು ಪ್ರದೇಶಗಳಿಗೆ ಪ್ರವಾಸ ಕೈಗೊಂಡಿದ್ದೆ. ಆ ಭೀಕರ ದೃಶ್ಯಗಳನ್ನು ನೋಡಿದರೆ ಮನಸ್ಸಿಗೆ ನೋವಾಗುತ್ತದೆ. ಗದಗ ಜಲ್ಲೆಯ ಹಲವು ಪ್ರದೇಶಗಳಲ್ಲಿಯೂ ವಿಪರೀತ ಮಳೆ ಸುರಿದಿದೆ. ಬೆಳೆ, ವಾಸದ ಮನೆಗಳಿಗೂ ಸಾಕಷ್ಟು ಹಾನಿಯಾಗಿದೆ.

ಮುಖ್ಯಮಂತ್ರಿಗಳು ಕೋವಿಡ್ ಸೋಂಕಿನಿಂದ ಬಳಲುತ್ತಿದ್ದರೂ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸುಮಾರು 200 ಕೋಟಿ.ರೂಗಳ ಮಧ್ಯಂತರ ಬೆಳೆ ಪರಿಹಾರವನ್ನು ಬಿಡುಗಡೆ ಮಾಡಿದ್ದಾರೆ.

ಗದಗ ಜಿಲ್ಲೆಗೆ ಐದು ಕೋಟಿ.ರೂಗಳ ಬೆಳೆ ಪರಿಹಾರ ಮಂಜೂರಾಗಿದೆ. ಮುಖ ನೋಡಿ ಮಣೆ ಹಾಕದೇ ಯಾವ ಬೆಳೆ ಹಾನಿಯಾಗಿದೆಯೆಂದು ನಿಖರವಾಗಿ ಸಮೀಕ್ಷೆ ನಡೆಸಿ ಹಾನಿ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಧಿಕಾರಿಗಳೂ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದಷ್ಟು ಶೀಘ್ರವಾಗಿ ಸರ್ಕಾರ ಬೆಳೆ ಹಾನಿ ಪರಿಹಾರವನ್ನು ತಲುಪಿಸಲಿದೆ ಎಂದರು.

ಗದಗ ನಗರದಲ್ಲಿ ಸಾಕಷ್ಟು ಕಡೆ ರಸ್ತೆಗಳೂ ಹಾನಿಗೊಳಗಾಗಿವೆ. ಇವುಗಳ ದುರಸ್ತಿ ಕಾರ್ಯಕ್ಕೆ 12-13 ಕೋಟಿ ರೂ. ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಟೆಂಡರ್ ಕಾಮಗಾರಿ ಪ್ರಗತಿಯಲ್ಲಿದೆ. ಮಳೆ ಸ್ವಲ್ಪ ಕಡಿಮೆಯಾಗುತ್ತಿದ್ದಂತೆಯೇ ಕೆಲಸ ಪ್ರಾರಂಭಿಸಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಯುವ ಮುಖಂಡ‌ ಅನಿಲ‌ ಮೆಣಸಿನಕಾಯಿ, ನಗರಸಭೆ ಅಧ್ಯಕ್ಷೆ ಉಷಾ ದಾಸರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಪಲ್ಲೇದ, ನಗರಸಭೆ ಸದಸ್ಯರಾದ ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ, ಮುಖಂಡರಾದ ಭೀಮಸಿಂಗ್ ರಾಠೋಡ, ಬಾಬು ಯಲಿಗಾರ, ಪರಮೇಶ್ ನಾಯಕ್, ಶರಣಪ್ಪ ಕಮಡೊಳ್ಳಿ ಸೇರಿದಂತೆ ಅನೇಕರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Related Posts

LEAVE A REPLY

Please enter your comment!
Please enter your name here

Stay Connected

0FansLike
3,790FollowersFollow
0SubscribersSubscribe
- Advertisement -spot_img

Latest Posts