HomeGadag Newsನಮ್ಮ ಪಕ್ಷಕ್ಕೆ ಸಿದ್ಧರಾಮೋತ್ಸವದಿಂದ ಹೊಸದೊಂದು ಶಕ್ತಿ ಬಂದಂತಾಗಿದೆ: ಎಚ್.ಕೆ. ಪಾಟೀಲ

ನಮ್ಮ ಪಕ್ಷಕ್ಕೆ ಸಿದ್ಧರಾಮೋತ್ಸವದಿಂದ ಹೊಸದೊಂದು ಶಕ್ತಿ ಬಂದಂತಾಗಿದೆ: ಎಚ್.ಕೆ. ಪಾಟೀಲ

Spread the love

ಯಾರೂ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬೇಡಿ

ವಿಜಯಸಾಕ್ಷಿ ಸುದ್ದಿ, ಗದಗ

ಸಿದ್ಧರಾಮಯ್ಯನವರಿಗೆ ವಯಸ್ಸು ಎಷ್ಟಾದರೂ ಆಗಿರಲಿ ಬಿಡಿ. ಅದರ ಬಗ್ಗೆ ತಕರಾರು ಯಾಕೆ? ಸ್ವತಃ ಸಿದ್ಧರಾಮಯ್ಯನವರೇ ತನಗೆ 75 ವರ್ಷ ಆಗಿದೆ ಎಂದು ಒಪ್ಪಿಕೊಂಡಿದ್ದಾರೆ. ಹುಟ್ಟಿದ ತಾರೀಖು ನನ್ನ ಅಪ್ಪ-ಅಮ್ಮನಿಗೂ ಗೊತ್ತಿಲ್ಲ, ನನಗೂ ಗೊತ್ತಿಲ್ಲ. ಟೀಚರ್ ದಾಖಲಿಸಿದ್ದು ಎಂದು ಅವರೇ ಹೇಳಿಕೊಂಡಿದ್ದಾರೆ. ಅವರ ಮನೆಯಲ್ಲಿಯೂ ಒಪ್ಪಿಕೊಂಡಿದ್ದಾರೆ. ನಾವೂ ಒಪ್ಪಿಕೊಂಡಿದ್ದೇವೆ. ಅವರ ಅಭಿಮಾನಿಗಳೂ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಯಾರೂ ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡಬೇಡಿ ಎಂದು ಶಾಸಕ ಎಚ್.ಕೆ. ಪಾಟೀಲ ಪ್ರತಿಕ್ರಿಯಿಸಿದರು.

ಅವರು ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ, ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿರುವ ಸಿದ್ದರಾಮಯ್ಯನವರ ವಯಸ್ಸಿನ ವಿಚಾರವಾಗಿ ಹೇಳಿದರು.

ರಾಷ್ಟ್ರಮಟ್ಟದಲ್ಲಿ ಅಭೂತಪೂರ್ವವಾದ ಕಾರ್ಯಕ್ರಮ ಅದಾಗಿತ್ತು. ನಮ್ಮ ಪಕ್ಷಕ್ಕೆ ಸಿದ್ಧರಾಮೋತ್ಸವದಿಂದ ಹೊಸದೊಂದು ಶಕ್ತಿ ಬಂದಂತಾಗಿದೆ. ಈ ಕಾರಣಕ್ಕಾಗಿಯೇ ಬಹಳ ಜನ ಕಸಿವಿಸಿಗೊಂಡಿದ್ದಾರೆ, ಗಾಬರಿಯಾಗಿದ್ದಾರೆ. ಅದಕ್ಕೇನೂ ಮಾಡಲಾಗುವುದಿಲ್ಲ. ಜನರ ಪ್ರೀತಿಯಿಂದಾಗಿ ಅಷ್ಟು ದೊಡ್ಡ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಅವರಿಗೆ 75 ವರ್ಷ ಪೂರ್ಣಗೊಂಡಿಲ್ಲ ಎಂದು ಹುಡುಕಿ ತಗಾದೆ ತೆಗೆಯುವದರಿಂದ ಏನೂ ಲಾಭವಿಲ್ಲ ಎಂದರು.

ಮಳೆಯಿಂದ ಉಂಟಾಗುತ್ತಿರುವ ಹಾನಿಗಳ ಬಗ್ಗೆ ಮಾತನಾಡಿದ ಶಾಸಕರು, ಅತಿಯಾದ ಮಳೆಯಿಂದ ತೀವ್ರ ಸಂಕಷ್ಟ ಎದುರಾಗಿದೆ. ಪರಿಹಾರ ಕೊಡಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಬೆಳೆದು ನಿಂತ ಹೆಸರು ಬೆಳೆ ನೆಲಕಚ್ಚಿದೆ, ಫಸಲು ಕೈಸೇರುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಮಳೆ ನಿಲ್ಲುವ ಲಕ್ಷಣವೂ ಇಲ್ಲ. ಇದರಿಂದ ಕೃಷಿಕ ಮತ್ತೊಮ್ಮೆ ಬಹಳ ತೊಂದರೆ ಅನುಭವಿಸುತ್ತಿದ್ದಾನೆ.

ದುರ್ದೈವವೆಂದರೆ, ರಾಜ್ಯ ಸರ್ಕಾರ ಬೆಳೆಹಾನಿ ಪರಿಹಾರ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿಯೇ ಇಲ್ಲ. ಬೆಳೆ ಪರಿಹಾರವನ್ನ ತಕ್ಷಣವೇ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇನೆ ಎಂದ ಅವರು, ಮನೆ ಬಿದ್ದು ಹಾನಿಗೊಳಗಾದವರಿಗೆ ಪರಿಹಾರ ನೀಡಬೇಕಾದ ಸರ್ಕಾರ ಗಪ್ಚುಪ್ ಕುಳಿತುಬಿಟ್ಟಿದೆ. ಹತ್ತು ದಿನದ ಹಿಂದೆ ಮಳೆಯಿಂದಾಗಿ ಹಾನಿಗೊಳಗಾದವರಿಗೆ ಇನ್ನೂ ಹಣ ತಲುಪಿಲ್ಲ. ತಕ್ಷಣವೇ ಪರಿಹಾರ ಹಣ ಬಿಡುಗಡೆ ಮಾಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹಾಳಾಗಿರುವ ರಸ್ತೆಗಳನ್ನು ರಿಪೇರಿ ಮಾಡಿಸುವಂತೆ ಮುಖ್ಯಮಂತ್ರಿಗಳನ್ನು ವಿನಂತಿಸುತ್ತೇನೆ ಎಂದ ಶಾಸಕ ಪಾಟೀಲ, ಗುಂಡಿಯಿಂದಾಗಿ ರಸ್ತೆ ಮೇಲೆ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ತಕ್ಷಣವೇ ರಸ್ತೆ ರಿಪೇರಿ ಕೆಲಸವನ್ನ ಎಲ್ಲ ಕಡೆಗಳಲ್ಲೂ ಮಾಡಿಸಬೇಕಿದೆ. ಹದಗೆಟ್ಟ ರಸ್ತೆಗಳ ಬಗ್ಗೆ ಜನ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ.

ಗದಗ ನಗರದಲ್ಲೂ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ಕಾರ್ಯಪ್ಪ ಸರ್ಕಲ್ ನಿಂದ ಮುಂದೆ ಬೆಟಗೇರಿಯವರೆಗೂ ಸಮಸ್ಯೆ ಉಂಟಾಗಿದೆ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ, ಈಗಾಗಲೇ ಹಣ ಮಂಜೂರಿಯಾಗಿರಬಹುದು. ಸೋಮವಾರದಿಂದಲೇ ಕೆಲಸ ಆರಂಭಿಸುವಂತೆ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ಸರ್ಕಾರದ ಆಡಳಿತ ಕುಸಿದು ಬೀಳುತ್ತಿದೆ. ಇದಕ್ಕೆ ಕಾರಣ ತಿಳಿಯುತ್ತಿಲ್ಲ. ಸರ್ಕಾರದ ವಿರುದ್ಧ ಕಾರ್ಯಕರ್ತರು ಬಂಡೆದ್ದಿರುವದೇ ಕಾರಣವಾ ಎಂಬುದು ತಿಳಿಯುತ್ತಿಲ್ಲ. ರಾಜಕೀಯವಾಗಿ ಬಡದಾಡಿಕೊಳ್ಳಿ. ಆದರೆ, ಜನರ ಕಷ್ಟಕಾಲದಲ್ಲಿ ತಕ್ಷಣ ಸ್ಪಂದಿಸಿ ಎಂದು ಶಾಸಕರು ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷರಾದ ವಾಸಣ್ಣ ಕುರಡಗಿ, ಸಿದ್ಧಲಿಂಗೇಶ್ವರ ಪಾಟೀಲ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಮಂದಾಲಿ, ಕಿಸಾನ್ ಸೆಲ್ ನ ಮಾಜಿ ಅಧ್ಯಕ್ಷ ಪರಮೇಶ್ವರ ಜಂತ್ಲಿ ಇದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img