ವಿದ್ಯಾರ್ಥಿಯನ್ನ ಮಹಡಿಯಿಂದ ಎತ್ತಿ ಹಾಕಿ, ಸಲಾಕೆಯಿಂದ ಥಳಿಸಿದ ಶಿಕ್ಷಕ; ಪ್ರಶ್ನೆಸಿದ ಇತರರ ಮೇಲೂ ಹಲ್ಲೆ
ವಿಜಯಸಾಕ್ಷಿ ಸುದ್ದಿ, ನರಗುಂದ
ಅತಿಥಿ ಶಿಕ್ಷಕನೊಬ್ಬ ಸಲಾಕೆಯಿಂದ ಥಳಿಸಿದ ಪರಿಣಾಮ ಹತ್ತು ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಜರುಗಿದೆ.
ತಾಲೂಕಿನ ಹದ್ಲಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಈ ದುರ್ಘಟನೆ ನಡೆದಿದ್ದು, ಪ್ರಶ್ನೆಸಿದ ವಿದ್ಯಾರ್ಥಿಯ ತಾಯಿ, ಇನ್ನೊಬ್ಬ ಶಿಕ್ಷಕನ ಮೇಲೂ ಹಲ್ಲೆ ಮಾಡಿದ್ದಾನೆ.
ಮೃತ ವಿದ್ಯಾರ್ಥಿಯನ್ನು ಭರತ (10) ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಆತ ಮೃತಪಟ್ಟಿದ್ದಾನೆ.
ಶಿಕ್ಷಕಿ ಗೀತಾ ಹಾಗೂ ಇನ್ನೊಬ್ಬ ಪಾಟೀಲ ಎಂಬ ಶಿಕ್ಷಕನ ಮೇಲೆ ಹಲ್ಲೆ ಮಾಡಲಾಗಿದೆ.
ಮೃತ ವಿದ್ಯಾರ್ಥಿ ಭರತನ ತಾಯಿಯೂ ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮುತ್ತಪ್ಪ ಹಡಗಲಿ ಎಂಬ ಶಿಕ್ಷಕನಿಂದ ಈ ಹಲ್ಲೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುತ್ತಪ್ಪ ಹಡಗಲಿಗೆ ಶಿಕ್ಷಕಿ ಗೀತಾ ಬಾರಕೇರ ಮೇಲೆ ವೈಯಕ್ತಿಕ ದ್ವೇಷ ಇರಬಹುದು ಎನ್ನಲಾಗಿದ್ದು, ಇದರ ಪರಿಣಾಮವೇ ಈ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ಇವತ್ತು ಅದೇನಾಗಿದೆಯೋ ಗೊತ್ತಿಲ್ಲ. ವಿದ್ಯಾರ್ಥಿ ಭರತನ ಮೇಲೆ ಹಲ್ಲೆ ಮಾಡಿ ಮಹಡಿಯಿಂದ ದೂಡಿದ್ದಾನೆ. ಇದರಿಂದಾಗಿ ಭರತನಿಗೆ ತೀವ್ರ ಪೆಟ್ಟು ಬಿದ್ದಿದ್ದು, ಇದನ್ನು ಪ್ರಶ್ನೆ ಮಾಡಿದ ತಾಯಿ, ಶಿಕ್ಷಕಿ ಗೀತಾ ಬಾರಕೇರ ಮೇಲೂ ಸಲಾಕೆಯಿಂದ ಹಲ್ಲೆ ಮಾಡಿದ್ಷು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ. ಬಿಡಿಸಲು ಬಂದ ಇನ್ನೊಬ್ಬ ಶಿಕ್ಷಕ ಪಾಟೀಲ ಎಂಬುವರ ಮೇಲೂ ಹಲ್ಲೆ ಮಾಡಿದ್ದಾನೆ. ಗಾಯಗೊಂಡ ಇಬ್ಬರನ್ನೂ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗೀತಾ ಬಾರಕೇರ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಗೆ ರವಾನೆ ಮಾಡಲಾಗಿದೆ ಎನ್ನಲಾಗಿದೆ.

ಸುದ್ದಿ ತಿಳಿದು ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಯಾವುದೇ ಅಹಿತಕರ ಘಟನೆ ಜರುಗಿದಂತೆ ಬಿಗಿ ಬಂದೋಬಸ್ತ ಕೈಗೊಂಡಿದ್ದಾರೆ.
ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.