ಅಂಚೆ ಕಛೇರಿಯಲ್ಲಿ ಪ್ರತ್ಯಕ್ಷವಾದ ಅಪರೂಪದ ಅತಿಥಿ! 30 ವರ್ಷಗಳ ನಂತರ ಮತ್ತೆ ನೋಡಿ ಅಚ್ಚರಿಗೊಂಡ ಉರಗತಜ್ಞ ಸ್ನೇಕ್‌ ಬುಡ್ಡಾ…

0
Spread the love

ವಿಜಯಸಾಕ್ಷಿ ಸುದ್ದಿ, ನರಗುಂದ

ಅಂದು ನರಗುಂದದ ಅಂಚೆ ಕಚೇರಿಯಲ್ಲಿ ಎಂದಿಗಿಂತ ಹೆಚ್ಚು ಗಡಿಬಿಡಿಯಿತ್ತು. ಸಾಮಾನ್ಯವೇ ಅಲ್ಲವಾ ಅನ್ನಿಸಬಹುದು. ಆದರೆ, ಗಡಿಬಿಡಿಗೆ ಕಾರಣವಾಗಿದ್ದು ಕೆಸಲದೊತ್ತಡವಲ್ಲ, ಕಚೇರಿಯಲ್ಲಿ ಕಾಣಿಸಿಕೊಂಡ ಒಂದು ಹಾವು!

ಅಪರೂಪದ ಈ ಹಾವು ಅದು ಹೇಗೋ ಅಂಚೆ ಕಚೇರಿಯಲ್ಲಿ ಸೇರಿಕೊಂಡಿತ್ತು. ಏನು ಮಾಡಬೇಕೆಂದು ದಿಕ್ಕು ತೋಚದ ಕಚೇರಿಯ ಸಿಬ್ಬಂದಿಗಳು, ಹಾಗೂ ಹೀಗೂ ಆ ಹಾವಿನ ಮೇಲೆ ಪ್ಲಾಸ್ಟಿಕ್‌ ಬುಟ್ಟಿಯೊಂದನ್ನು ಮುಚ್ಚಿಟ್ಟು, ಉರಗತಜ್ಞ ಸ್ನೇಕ್‌ ಬುಡ್ಡಾರನ್ನು ಫೋನ್‌ ಮಾಡಿ ಕರೆಸಿದ್ದರು. ಸ್ಥಳಕ್ಕಾಗಮಿಸಿದ ಸ್ನೇಕ್‌ ಬುಡ್ಡಾ ಕೂಡ ಈ ಅಪರೂಪದ ಹಾವನ್ನು ಆ ಸ್ಥಳದಲ್ಲಿ ಕಂಡು ಚಕಿತರಾಗಿದ್ದರು!

ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕದ ಉತ್ತರ ಕನ್ನಡ ಭಾಗಗಳಲ್ಲಷ್ಟೇ ಕಂಡುಬರುವ ಇಂಡಿಯನ್‌ ಕೊರೊಲ್‌ ಸ್ನೇಕ್‌ ಎಂದು ಹೆಸರಿಸುವ ಈ ಹಾವು ಹೆಚ್ಚೆಂದರೆ 20-21 ಇಂಚ್‌ಗಳಷ್ಟು ಮಾತ್ರ ಬೆಳೆಯುತ್ತದೆ. ಮೈಯ ಮೇಲ್ಭಾಗ ಕಂದು ಬಣ್ಣವಿದ್ದು, ಅಡಿಭಾಗದಲ್ಲಿ ಕಿತ್ತಳೆ ಬಣ್ಣವಿರುತ್ತದೆ.

ತಲೆ ಹಾಗೂ ಬಾಲದ ಭಾಗ ಕಪ್ಪಾಗಿರುತ್ತದೆ. ನಾಗರ ಹಾವಿನಷ್ಟೇ ವಿಷಕಾರಿಯಾಗಿರುವ ಈ ಹಾವು ನ್ಯುರೋ ಟಾಕ್ಸಿನ್‌ ವಿಷವನ್ನೇ ಹೊಂದಿದೆ. ಅಳಿವಿನಂಚಿನಲ್ಲಿರುವ ಅಪರೂಪದ ಹಾವಾಗಿದೆ. ಇದರಲ್ಲೇ ಇನ್ನೊಂದು ವಿಷಕಾರಿಯಲ್ಲದ ಹಾವೂ ಇದ್ದು, ಎರಡೂ ಒಂದೇ ರೀತಿ ಕಾಣಿಸುತ್ತವೆ. ಮಳೆ ಹಾತೆ, ಗೆದ್ದಲು ಹುಳಗಳು ಈ ಹಾವಿನ ಪ್ರಮುಖ ಆಹಾರವಾಗಿದೆ ಎಂದು ವಿವರಿಸಿದ ಸ್ನೇಕ್‌ ಬುಡ್ಡಾ, ಸುಮಾರು 30 ವರ್ಷಗಳ ನಂತರ ಮತ್ತೆ ಈ ಹಾವನ್ನು ರಕ್ಷಿಸುತ್ತಿದ್ದೇನೆ, ಅಷ್ಟು ಅಪರೂಪದ ಹಾವು ಇದಾಗಿದೆ ಎಂದು ವಿವರಣೆ ನೀಡಿದರು.

ಕಡಲ ಹಾವು/ಹವಳದ ಹಾವು ಎಂದೂ ಕರೆಯಲ್ಪಡುವ ಈ ಹಾವು ನೆರೆ ರಾಜ್ಯಗಳಿಂದ ಬೀಜ, ಗೊಬ್ಬರಗಳನ್ನು ತರುವ ಲಾರಿಗಳಲ್ಲಿ ಸೇರಿ ಇಲ್ಲಿ ತಲುಪಿರಬಹುದು ಎಂದು ಅಭಿಪ್ರಾಯಪಟ್ಟ ಸ್ನೇಕ್‌ ಬುಡ್ಡಾ ಹಾವನ್ನು ರಕ್ಷಿಸಿ, ಸುರಕ್ಷಿತ ಜಾಗಕ್ಕೆ ಬಿಟ್ಟುಬಂದಿದ್ದಾರೆ.


Spread the love

LEAVE A REPLY

Please enter your comment!
Please enter your name here