ಪಾಟ ತುಂಡಾಗಿ ಕಂದಕಕ್ಕೆ ಉರುಳಿದ ಬಸ್….
ವಿಜಯಸಾಕ್ಷಿ ಸುದ್ದಿ, ರೋಣ/ ನರೇಗಲ್
35 ಪ್ರಯಾಣಿಕರನ್ನು ಹೊತ್ತು, ಗಜೇಂದ್ರಗಡದಿಂದ ಅರಸಿಕೇರಿಗೆ ಹೊರಟಿದ್ದ ಗಜೇಂದ್ರಗಡ ಘಟಕದ ಬಸ್ ನಿಡಗುಂದಿ ಗ್ರಾಮದ ಬಳಿ ಶುಕ್ರವಾರ ಪಲ್ಟಿಯಾಗಿದೆ. ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಪ್ರಯಾಣಿಕರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಜೇಂದ್ರಗಡ ಸಾರಿಗೆ ಘಟಕಕ್ಕೆ ಸೇರಿದ್ದ ಬಸ್ ಗದಗ ಮಾರ್ಗವಾಗಿ ಅರಸಿಕೇರಿಗೆ ಹೊರಟಿತ್ತು. ಮಾರ್ಗಮಧ್ಯ ನಿಡಗುಂದಿ ಗ್ರಾಮದ ಬಳಿ ಬಸ್‌ನ ಮುಂದಿನ ಭಾಗದ ಪಾಟ ತುಂಡಾದ ಪರಿಣಾಮ, ರಸ್ತೆಯ ಬದಿಯಲ್ಲಿರುವ ಕಂದಕಕ್ಕೆ ಬಸ್ ಉರುಳಿ ಬಿದ್ದಿದೆ. ಬಸ್ ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ಗದಗ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು.

ಬಸ್ ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎನ್ನಲಾಗಿದ್ದು, ಮುಂಬಾಗದ ಪಾಟ ತುಂಡಾಗುತ್ತಿದ್ದಂತೆ ಎಚ್ಚರ ವಹಿಸಿದ ಚಾಲಕ, ಬಸ್‌ನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಜಾಗೃತೆಯಿಂದ ಚಲಾಯಿಸಿದ್ದಾನೆ. ಇಲದಿದ್ದರೆ 20ರಿಂದ 30 ಅಡಿ ಹಿಂದಕ್ಕೆ ಬಸ್ ಪಲ್ಟಿಯಾಗಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು ಎಂದು ಪಕ್ಕದ ಜಮೀನಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೂಲಿ ಕಾರ್ಮಿಕರು ಮಾಹಿತಿ ನೀಡಿದರು.

ಚಾಲಕನಿಗೆ ಸ್ವಲ್ಪ ಗಾಯವಾಗಿದ್ದು, ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಘಟಕದ ಅಧಿಕಾರಿ ಕೆ.ಎಸ್ ಪಲ್ಲೇದ ತಿಳಿಸಿದ್ದಾರೆ. ಈ ಕುರಿತು ನರೇಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.