ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್…….
ವಿಜಯಸಾಕ್ಷಿ ಸುದ್ದಿ, ಗದಗ
ನಮ್ಮ ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಜನರಿಗೆ ಮಾತು ಕೊಟ್ಟಿರುವಂತೆ ನಡೆದುಕೊಳ್ಳುತ್ತೇವೆ. ನಾಳೆ ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿಯೂ ಗ್ಯಾರಂಟಿ ವಿಷಯ ಚರ್ಚೆಯಾಗಲಿದ್ದು, ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ. ಗ್ಯಾರಂಟಿ ವಿಷಯದಲ್ಲಿ ಹಾಗಾಗಬಹುದು, ಹೀಗೆ ನಡೆಯಬಹುದು ಎಂದು ಕಲ್ಪಿಸಿಕೊಂಡವರು ಖಂಡಿತವಾಗಿಯೂ ನಿರಾಶೆಗೊಳಗಾಗುತ್ತಾರೆ ಮತ್ತು, ಗ್ಯಾರಂಟಿ ಯೋಜನೆಗಳ ಮೂಲಕ ಬದುಕು ಕಟ್ಟಿಕೊಳ್ಳುವವರು, ಬದುಕು ಸುಧಾರಿಸಿಕೊಳ್ಳುವವರು ಸಂತಸಪಡುತ್ತಾರೆ ಎಂದು ಸಚಿವ ಎಚ್ ಕೆ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಗದಗ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಪಠ್ಯ ಪರಿಷ್ಕರಣೆ ವಿಷಯವಾಗಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಪಠ್ಯ ಪರಿಷ್ಕರಣೆ ವಿಷಯವಾಗಿ ಹೆಚ್ಚಿನ ಮಾಹಿತಿ ಇಲ್ಲ ಮತ್ತು ನಾನು ಆ ಬಗ್ಗೆ ಗಮನ ಹರಿಸಿಲ್ಲ. ಅಗತ್ಯವಾದಲ್ಲಿ, ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಮಾತನಾಡುತ್ತೇನೆ. ಶಿಕ್ಷಣ ಕ್ಷೇತ್ರದ ಸ್ನೇಹಿತರ ಜೊತೆ ಮಾತನಾಡಿ ಸೂಕ್ತ ಸಿದ್ಧತೆ ಮಾಡಿಕೊಳ್ಳುತ್ತೇನೆ ಎಂದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್, ಜಿಲ್ಲಾ ಪಂಚಾಯತ್ ಸಿಇಒ ಸುಶೀಲಾ ಬಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಸಭೆಯಲ್ಲಿ ಪಾಲ್ಗೊಂಡು ಅಧಿಕಾರಿಗಳಿಂದ ಗದಗ-ಬೆಟಗೇರಿ ವ್ಯಾಪ್ತಿಯ ಅಭಿವೃದ್ಧಿಗಳ ಕುರಿತು ಮಾಹಿತಿ ಪಡೆದುಕೊಂಡರು.
೨೦೧೩ರಿಂದ ೨೦೧೮ ರ ಅವಧಿಯಲ್ಲಿ ಸ್ಥಗಿತಗೊಂಡ ಕಾಮಗಾರಿಗಳ ಬಗ್ಗೆ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿದರು. ವಿಳಂಬವಾದ ಕಾಮಗಾರಿಗಳ ಬಗ್ಗೆ ಸ್ಪಷ್ಟನೆ ಪಡೆದುಕೊಂಡರು. ೨೪/೭ ಕುಡಿಯುವ ನೀರಿನ ಯೋಜನೆ, ಒಳಚರಂಡಿ ಯೋಜನೆ, ವಸತಿ ಯೋಜನೆ, ಪ್ರವಾಸೋದ್ಯಮ ಇತ್ಯಾದಿ ಜಿಲ್ಲಾ ವ್ಯಾಪ್ತಿಯಲ್ಲಿನ ವಿವಿಧ ಯೋಜನೆಗಳ ಬಗ್ಗೆ ಚರ್ಚಿಸಿ, ಸ್ಥಗಿತಗೊಂಡ ಯೋಜನೆಗಳ ಮರು ಜಾರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಶಹರ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಬಿ ಅಸೂಟಿ, ನಗರಸಭೆ ಸದಸ್ಯ ಬರಕತ್ ಅಲಿ ಮುಲ್ಲಾ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಮಂದಾಲಿ, ಮುಖಂಡರಾದ ಅರವಿಂದ ಹುಲ್ಲೂರ ಸೇರಿದಂತೆ ಅನೇಕರಿದ್ದರು.