ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಸೆಂಚುರಿ ಡೈರೆಕ್ಟರ್ ಓಂ ಸಾಯಿಪ್ರಕಾಶ್ ಮತ್ತೇ ಡೈರೆಕ್ಷನ್ ಕ್ಯಾಪ್ ಹಾಕಿದ್ದಾರೆ. ಈ ಸಲ ಮತ್ತೇ ಭಕ್ತಿಪ್ರಧಾನ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ದಕ್ಷಿಣ ಭಾರತದಲ್ಲೇ ಪವರ್ ಫುಲ್, ಫೇಮಸ್ ಆಗಿರೊ ಕಲ್ಯಾಣ ಕರ್ನಾಟಕ ಭಾಗದ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮದೇವಿ ಕುರಿತ ಚಿತ್ರಕ್ಕೆ ಮಂಗಳವಾರ ಹುಲಗಿ ದೇವಸ್ಥಾನದಲ್ಲಿ ಮುಹೂರ್ತ ನಡೆಯಿತು.
ಸಾಯಿಪ್ರಕಾಶ್ ನಿರ್ದೇಶನದ 105ನೇ ಚಿತ್ರವಾದ ವಿಶ್ವರೂಪಿಣಿ ಹುಲಿಗೆಮ್ಮ ಚಿತ್ರದ ಚಿತ್ರೀಕರಣದ ಮೊದಲ ದೃಶ್ಯಕ್ಕೆ ಸಿನಿಮಾ ನೂರು ದಿನ ಕಾಣಲಿ, ಯಶಸ್ಸು ಗಳಿಸಲಿ ಎಂದು ಶುಭ ಕೋರಿ ಸಚಿವ ಆನಂದ್ ಸಿಂಗ್ ಅವರ ಸಂಬಂಧಿ ಬಿಜೆಪಿ ನಾಯಕಿ ಕವಿತಾ ಸಿಂಗ್ ಅವರು ಕ್ಲಾಪ್ ಮಾಡಿದರು.
ಶ್ರೀಮತಿ ಲಕ್ಷ್ಮಮ್ಮ ರಾಮೇಗೌಡರ ಆಶೀರ್ವಾದದೊಂದಿಗೆ ಭಾವನಾ ಪ್ರೊಡಕ್ಷನ್ ಅವರ ಗೌರಮ್ಮ ಪಿ.ಅವರು ನಿರ್ಮಿಸುತ್ತಿರುವ ವಿಶ್ವರೂಪಿಣಿ ಹುಲಿಗೆಮ್ಮ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಕೊಪ್ಪಳ, ಹುಲಗಿ, ಬುಕ್ಕಸಾಗರ ಸುತ್ತಮುತ್ತಲಿನ ಸ್ಥಳಗಳಲ್ಲಿ ಸುಮಾರು 15 ದಿನಗಳ ಕಾಲ ನಡೆಯಲಿದೆ. ಸೆಪ್ಟೆಂಬರ್‌ನಲ್ಲಿ ಬೆಂಗಳೂರು ಸೇರಿದಂತೆ ಹಲವೆಡೆ ಶೂಟಿಂಗ್ ನಡೆಯಲಿದ್ದು ಹೊಸ ವರ್ಷಕ್ಕೆ ಹುಲಿಗೆಮ್ಮ ದರ್ಶನ ಪಡೆಯಬಹುದು. ಸಿನಿಮಾ ಕನ್ನಡದಲ್ಲೇ ಚಿತ್ರೀಕರಣಗೊಂಡು ತೆಲುಗು, ತಮಿಳು, ಮರಾಠಿ ಮತ್ತಿತರ ಭಾಷೆಗಳಿಗೆ ಡಬ್ ಆಗಲಿದೆ ಎಂಬುದು ಸದ್ಯದ ಅಪ್ಡೇಟ್ಸ್.
ಚಿತ್ರದ ಮುಹೂರ್ತ ಸಮಾರಂಭದ ಸಾನಿಧ್ಯ ಸಿದ್ದನಕೊಳ್ಳದ ಶ್ರೀ ಶಿವಕುಮಾರ್ ಸ್ವಾಮೀಜಿ ವಹಿಸಿದ್ದರು.
ಚಿತ್ರಗಳು: ನಾಗರಾಜ ಹಿರೇಹಡಗಲಿ.