ಮಂಡ್ಯ: ಕನಸಿನಲ್ಲಿ ಶ್ರೀರಂಗನಾಥಸ್ವಾಮಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಆಗಮಿಸಿದ ಟಿವಿಎಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವೇಣು ಶ್ರೀನಿವಾಸನ್ ಅವರು ₹66.78 ಲಕ್ಷ ಮೌಲ್ಯದ ಚಿನ್ನದ ಅಷ್ಟಲಕ್ಷ್ಮಿ ಕಲಶವನ್ನು ಸಮರ್ಪಿಸಿದ್ದಾರೆ.
398.580 ಗ್ರಾಂ ಶುದ್ಧ ಬಂಗಾರದಿಂದ ನಿರ್ಮಿಸಿರುವ ಕಲಶದ ಸುತ್ತಲೂ ಅಷ್ಟಲಕ್ಷ್ಮಿಯರ ಚಿತ್ರಗಳನ್ನು ಕೆತ್ತಲಾಗಿದೆ. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ ಅವರಿಗೆ ಕಲಶ ಹಸ್ತಾಂತರಿಸಲಾಯಿತು.
ನಂತರ ಮಂಗಳವಾದ್ಯಗಳೊಂದಿಗೆ ರಾಯಗೋಪುರದಿಂದ ಗರ್ಭಗುಡಿಯವರೆಗೆ ಕಲಶವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಶ್ರೀರಂಗನಾಥಸ್ವಾಮಿ ಸನ್ನಿಧಿಯಲ್ಲಿ ಕಲಶವನ್ನಿರಿಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರಧಾನ ಅರ್ಚಕ ವಿಜಯಸಾರಥಿ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.
ಶ್ರೀರಂಗಪಟ್ಟಣದ ಈ ಪವಿತ್ರ ಕ್ಷೇತ್ರಕ್ಕೆ 27 ವರ್ಷಗಳ ಹಿಂದೆಯೇ ಬರಬೇಕೆಂಬ ಆಸೆ ಹೊಂದಿದ್ದೆ. ಆದರೆ ಅಂದು ಭೇಟಿ ಸಾಧ್ಯವಾಗಿರಲಿಲ್ಲ. ಇದೀಗ ಶ್ರೀರಂಗನಾಥಸ್ವಾಮಿ ಕನಸಿನಲ್ಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಲ್ಲಿಗೆ ಬಂದು ಸೇವೆ ಸಲ್ಲಿಸಿದ್ದೇನೆ ಎಂದು ವೇಣು ಶ್ರೀನಿವಾಸನ್ ಹೇಳಿದರು.



