ಟೆಹ್ರಾನ್: ಹಿಜಬ್ ಧರಿಸದೆ ಸಂಗೀತ ಕಾರ್ಯಕ್ರಮ ನೀಡಿದ್ದ ಇರಾನಿನ 29 ವರ್ಷದ ಗಾಯಕಿ ಪರಸ್ತೂ ಅಹ್ಮದಿ ಅವರಿಗೆ 74 ಚಾಟಿ ಏಟುಗಳ ಶಿಕ್ಷೆ ವಿಧಿಸಲಾಗಿದೆ. ಇದರ ಜೊತೆಗೆ ಎರಡು ವರ್ಷಗಳ ಕಾಲ ಸಂಗೀತ ಕಾರ್ಯಕ್ರಮ ನೀಡಲು ಹಾಗೂ ವಿದೇಶ ಪ್ರವಾಸ ಕೈಗೊಳ್ಳಲು ನಿಷೇಧ ಹೇರಲಾಗಿದೆ. ಗಾಯಕಿಯ ವಕೀಲರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
2024ರ ಡಿಸೆಂಬರ್ನಲ್ಲಿ ಆನ್ಲೈನ್ನಲ್ಲಿ ಪ್ರಕಟಿಸಿದ್ದ ಸಂಗೀತ ಕಾರ್ಯಕ್ರಮದ ವಿಡಿಯೊಗೆ ಸಂಬಂಧಿಸಿದಂತೆ ಪರಸ್ತೂ ಅಹ್ಮದಿ, ಅವರ ನಾಲ್ವರು ಸಂಗೀತಗಾರರು ಹಾಗೂ ತಂಡದ ನಾಲ್ವರು ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಗಾಯಕಿ ಮತ್ತು ತಂಡದ ವಿರುದ್ಧ ನ್ಯಾಯಾಲಯ ಕ್ರಮ ಕೈಗೊಂಡಿತ್ತು.
ಹಿಜಬ್ ಧರಿಸದೆ ಹಾಡಿದ್ದ ಗಾಯಕಿ
ಸಾಂಪ್ರದಾಯಿಕ ಕ್ಯಾರವಾನ್ಸೆರಾಯ್ ಸಂಕೀರ್ಣದ ಆವರಣದಲ್ಲಿ ನಡೆದಿದ್ದ ಈ ಸಂಗೀತ ಕಾರ್ಯಕ್ರಮದಲ್ಲಿ ಮಂದ ಬೆಳಕಿನ ವೇದಿಕೆಯನ್ನು ದೊಡ್ಡ ಪರ್ಷಿಯನ್ ಕಾರ್ಪೆಟ್ನಿಂದ ಅಲಂಕರಿಸಲಾಗಿತ್ತು. ಖಾಲಿ ಪ್ರೇಕ್ಷಕರ ಎದುರು ಪರಸ್ತೂ ಅಹ್ಮದಿ ಶೋಕಗೀತೆಗಳನ್ನು ಹಾಡಿದ್ದರು.
ಇರಾನ್ನಲ್ಲಿ ಮಹಿಳೆಯರು ಸಾರ್ವಜನಿಕವಾಗಿ ಹಾಡುವುದರ ಮೇಲೆ ನಿರ್ಬಂಧಗಳಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಗಮನ ಸೆಳೆದಿತ್ತು. ಕಾರ್ಯಕ್ರಮದಲ್ಲಿ ಸಂಗೀತಗಾರರು ಕಪ್ಪು ಬಣ್ಣದ ಉಡುಪು ಧರಿಸಿದ್ದರು. ಅಹ್ಮದಿ ಉದ್ದನೆಯ ಪಟ್ಟಿಗಳಿದ್ದ ಗೌನ್ ಧರಿಸಿ, ಕೆಂಪು ಲಿಪ್ಸ್ಟಿಕ್ ಹಚ್ಚಿಕೊಂಡಿದ್ದರು. ಆದರೆ, ಹಿಜಬ್ ಧರಿಸಿರಲಿಲ್ಲ.
74 ಛಡಿಯೇಟು ಶಿಕ್ಷೆ ಜಾರಿ
ಗಾಯಕಿ ಪರಸ್ತೂ ಅಹ್ಮದಿ ಹಾಗೂ ಸಂಗೀತ ಕಾರ್ಯಕ್ರಮದ ವಿಡಿಯೊ ನಿರ್ಮಾಣದ ಹಿಂದೆ ಇದ್ದ ತಂಡದ ನಾಲ್ವರು ಸದಸ್ಯರಿಗೆ ವಿಧಿಸಲಾಗಿದ್ದ 74 ಛಡಿಯೇಟುಗಳ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ ಎಂದು ಅವರ ವಕೀಲ ಮುಸ್ತಫಾ ನಿಲಿ ತಿಳಿಸಿದ್ದಾರೆ.
ಸಾರ್ವಜನಿಕ ಸಭ್ಯತೆಯನ್ನು ಹಾಳುಮಾಡುವುದು ಹಾಗೂ ಅಶ್ಲೀಲ ವಿಷಯಗಳ ಪ್ರಸಾರ, ಪ್ರಕಟಣೆ ಮತ್ತು ಹರಡುವಿಕೆಯಲ್ಲಿ ಭಾಗಿಯಾಗಿರುವ ಆರೋಪಗಳಡಿ ಅಹ್ಮದಿ ಮತ್ತು ಅವರ ತಂಡದ ಸದಸ್ಯರು ನ್ಯಾಯಾಲಯದ ವಿಚಾರಣೆ ಎದುರಿಸಿದ್ದರು.
ಶಿಕ್ಷೆಗೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ವಿರೋಧ
ಮಾನವ ಹಕ್ಕುಗಳ ಸಂಘಟನೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ಈ ಶಿಕ್ಷೆಯ ವಿರುದ್ಧ ಧ್ವನಿ ಎತ್ತಿದೆ. ಇರಾನ್ ವಿಧಿಸಿರುವ ಶಿಕ್ಷೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದೆ.
2022ರ ಸೆಪ್ಟೆಂಬರ್ನಲ್ಲಿ ಮಹ್ಸಾ ಅಮಿನಿ ಎಂಬ ಯುವತಿಯ ಪೊಲೀಸ್ ಕಸ್ಟಡಿಯಲ್ಲಿನ ಸಾವಿನ ಬಳಿಕ ಇರಾನ್ನಲ್ಲಿ ಹಿಜಬ್ ನಿಯಮಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಈ ಘಟನೆ ಬಳಿಕ ದೇಶದ ಹಲವು ಮಹಿಳೆಯರು ಸಾರ್ವಜನಿಕವಾಗಿ ಹಿಜಬ್ ಧರಿಸದೆ ಕಾಣಿಸಿಕೊಳ್ಳುತ್ತಿದ್ದಾರೆ. ವಸ್ತ್ರ ಸಂಹಿತೆ ಉಲ್ಲಂಘನೆಯ ಆರೋಪದಡಿ ಹಲವರನ್ನು ಬಂಧಿಸಿರುವ ಘಟನೆಗಳೂ ವರದಿಯಾಗಿವೆ.










